ಹೊಸ ದಿಗಂತ ವರದಿ, ದಾವಣಗೆರೆ
ರಾಜ್ಯ ಸರ್ಕಾರ ಕೂಡಲೇ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸದಿದ್ದರೆ ಅಯೋಧ್ಯೆ ಮಾದರಿಯ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಎಚ್ಚರಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠವು ಹಿಂದೂಗಳಿಗೆ ಸೇರಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೂ ಸರ್ಕಾರ ಅದನ್ನು ಹಿಂದೂಗಳಿಗೆ ಬಿಟ್ಟು ಕೊಡುತ್ತಿಲ್ಲ. ಹಲವು ವರ್ಷಗಳಿಂದ ಹಿಂದೂಗಳು ಈ ಬಗ್ಗೆ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರ್ಕಾರಗಳು ಈ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ತಾವು ರಾಜ್ಯದ ಮುಖ್ಯಮಂತ್ರಿಯಾದರೆ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವುದಾಗಿ ಹೇಳಿದ್ದರು. ಈಗ ಬಿಎಸ್ವೈ ಮೂರನೇ ಅವಧಿಗೆ ಮುಖ್ಯಮಂತ್ರಿಯಾದರೂ ಮಾತಿನಂತೆ ನಡೆದುಕೊಂಡಿಲ್ಲ. ದತ್ತಪೀಠ ವಿವಾದವನ್ನು ಜೀವಂತವಾಗಿಡುವ ಮೂಲಕ ಬಿಜೆಪಿ ಸರ್ಕಾರ ಹಿಂದೂ ಸಮಾಜಕ್ಕೆ ಅಪಮಾನ ಮಾಡುತ್ತಿದೆ. ಇನ್ನಾದರೂ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡು, ಸಿಎಂ ಸ್ಥಾನಕ್ಕೆ ಅಂಟಿರುವ ಕಳಂಕ ತೊಳೆಯಲಿ. ತಕ್ಷಣ ಮುಖ್ಯಮಂತ್ರಿಗಳು ದತ್ತಪೀಠಕ್ಕೆ ಆಗಮಿಸಿ, ಗುರುಗಳ ಪೀಠದೆದುರು ಮಾತಿನಂತೆ ನಡೆದುಕೊಳ್ಳಬೇಕು. ಅಧಿವೇಶನದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ದತ್ತಪೀಠವನ್ನು ಹಿಂದೂಗಳಿಗೆ ಮುಕ್ತಗೊಳಿಸಲು ಕಳೆದ 15 ವರ್ಷಗಳಿಂದ ಶೋಭಾಯಾತ್ರೆ ನಡೆಸುತ್ತಾ ಬಂದಿದ್ದೇವೆ. ಅದರಂತೆ ಈ ವರ್ಷವೂ ನ.22ರಿಂದ 26ರವರೆಗೆ ಐದು ದಿನಗಳ ಕಾಲ ಇಡೀ ರಾಜ್ಯದಲ್ಲಿ ದತ್ತ ಮಾಲೆ ಅಭಿಯಾನ ನಡೆಯಲಿದ್ದು, ಚಿಕ್ಕಮಗಳೂರಿನಲ್ಲಿ ಇದಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ನ.23ರಂದು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ದತ್ತ ದೀಪೋತ್ಸವ, ನ.24ರಂದು ಸಹಿ ಸಂಗ್ರಹಣೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು. ನ.25ರಂದು ದತ್ತ ಪರಂಪರೆಯಂತೆ ಭಿಕ್ಷಾಟನೆ ಸಂಪ್ರದಾಯ ಪಾಲಿಸಿ, ಪಡಿ ಸಂಗ್ರಹಣೆ ಮಾಡಿ, ಸಂಕಷ್ಟಕ್ಕೀಡಾದವರಿಗೆ ದವಸ-ಧಾನ್ಯ ನೀಡಲಾಗುವುದು. ನ.26ರಂದು ದತ್ತಪೀಠದಲ್ಲಿ ದತ್ತ ಹೋಮ ನಡೆಸಲಿದ್ದು, ಈ ಬಾರಿ ಯಾವುದೇ ಧರ್ಮಸಭೆ, ಶೋಭಾಯಾತ್ರೆ ಹಮ್ಮಿಕೊಂಡಿಲ್ಲ ಎಂದು ಅವರು ವಿವರಿಸಿದರು.
ಸಂಘಟನೆಯ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಜಿಲ್ಲಾಧ್ಯಕ್ಷ ಮಣಿಕಂಠ, ಮಾರ್ಕಂಡೇಯ, ರಮೇಶ್ ಕರಾಟೆ, ಬಿ.ಜಿ.ವಿನೋದ್, ಸಾಗರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.