Sunday, August 14, 2022

Latest Posts

ದತ್ತಮಾಲಾ ಅಭಿಯಾನಕ್ಕೆ ಕೋವಿಡ್-19 ಹೆಸರನಲ್ಲಿ ನಿರ್ಬಂಧ ಹೇರುತ್ತಿರುವುದು ಸರಿಯಲ್ಲ: ಶ್ರೀ ರಿಷಿಕುಮಾರ ಸ್ವಾಮೀಜಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಇದೇ ನವೆಂಬರ್ 26 ರಂದು ಶ್ರೀರಾಮಸೇನೆ ಸಂಘಟನೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನಕ್ಕೆ ಕೋವಿಡ್-19 ಹೆಸರನಲ್ಲಿ ಜಿಲ್ಲಾಡಳಿತ ನಿರ್ಬಂಧಗಳನ್ನು ಹೇರುತ್ತಿರುವುದು ಸರಿಯಲ್ಲ ಎಂದು ಕಾಳಿ ಮಠದ ಶ್ರೀ ರಿಷಿಕುಮಾರ ಸ್ವಾಮೀಜಿ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದತ್ತಮಾಲಾ ಅಭಿಯಾನಕ್ಕೆ ಇಡೀ ರಾಜ್ಯ ಕಾಯುತ್ತಿದೆ ಆದರೆ ಜಿಲ್ಲಾಡಳಿತ ಸೀಮಿತ ಭಕ್ತರ ಸಮ್ಮುಖದಲ್ಲಿ ಕಾರ್ಯಕ್ರಮ ಮಾಡಿ ಎನ್ನುತ್ತಿದೆ. ಇದು ಇಡೀ ರಾಜ್ಯದ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ. ಇಂತಹ ಕಾರ್ಯವನ್ನು ಇಲ್ಲಿನ ಜಿಲ್ಲಾಡಳಿತ ನಿರಂತರವಾಗಿ ಮಾಡುತ್ತಲೇ ಬಂದಿದೆ ಎಂದು ದೂರಿದರು.
ಕಳೆದ ವರ್ಷ ದತ್ತ ವಿಗ್ರಹವನ್ನು ಬೀದಿಯಲ್ಲಿಡಿಸುವಂತಹ ಕೆಲಸವನ್ನು ಮಾಡಿದರು. ಈಗ ಅದನ್ನು ತಮ್ಮ ಮಠದಲ್ಲಿಟ್ಟು ತ್ರಿಕಾಲ ಪೂಜೆ ನೆರವೇರಿಸುತಿದ್ದೇವೆ.
ಈ ಬಾರಿ ದತ್ತಮಾಲಾ ಅಭಿಯಾನಕ್ಕೆ ಇಡೀ ರಾಜ್ಯಕ್ಕೆ ಕರೆ ಕೊಡಲಾಗಿದೆ. ಯಾಗ ನಡೆಸಲು ಸಿದ್ಧತೆ ನಡೆಸಿದ್ದೇವೆ. ಕೋವಿಡ್-19 ಕಾರಣಕ್ಕೆ ಜಿಲ್ಲಾಡಳಿತ ವಿಧಿಸಿರುವ ನಿಬರ್ಂಧಕ್ಕೆ ಬದ್ಧರಾಗಿ ಈ ಬಾರಿ ಮೆರವಣಿಗೆಯನ್ನೂ ನಾವು ನಿಲ್ಲಿಸಿದ್ದೇವೆ. ಸಾಮಾಜಿಕ ಅಂತರ ಕಾಪಾಡಬೇಕೆ ಅದನ್ನೂ ಮಾಡುತ್ತೇವೆ. ಹೀಗಿದ್ದರೂ ಉಳಿದ ಕಾರ್ಯಕ್ರಮಗಳ ಮೇಲೂ ನಿರ್ಬಂಧಗಳನ್ನು ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಉಪ ಚುನಾವಣೆಗಳಲ್ಲಿ ಇಡೀ ಸರ್ಕಾರವೇ ಹೋಗಿ ಪ್ರಚಾರ ಮಾಡಿದಾಗ ಯಾವ ಅಂತರ ಕಾಪಾಡಲಾಯಿತು ಎಂದು ಪ್ರಶ್ನಿಸಿದ ಅವರು ಹಿಂದೂಗಳ ಕಾರ್ಯಕ್ರಮಕ್ಕೆ ಮಾತ್ರ ಯಾಕೆ ನಿರ್ಬಂಧ ಎಂದರು. ಸರ್ಕಾರ ಈ ಕೂಡಲೇ ಗಮನ ಹರಿಸಿ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲಿಸಿ ಅಗತ್ಯ ಸೌಲತ್ತುಗಳನ್ನು ಕಲ್ಪಿಸಿಕೊಡಬೇಕು ಎಂದರು.
ದೀಪಾವಳಿಗೆ ಪಟಾಕಿ ಹಚ್ಚಬಾರದು, ಹಸಿರು ಪಟಾಕಿಗಳನ್ನಷ್ಟೇ ಉರಿಸಬೇಕು ಎಂದು ಸರ್ಕಾರ ಹೇಳಿದೆ. ಆದರೆ ಹಸಿರು ಪಟಾಕಿಗಳು ಯಾವುದು, ಎಲ್ಲಿ ಸಿಗುತ್ತವೆ ಎನ್ನುವುದನ್ನು ಹೇಳುವುದಿಲ್ಲ. ಕಾನೂನು ಮಾಡಿದರೆ ಸರಿಯಲ್ಲ. ಬಡವರು ಪಾಟಾಕಿಗಾಗಿ ಚೀಟಿಗಳನ್ನು ಹಾಕಿದ್ದಾರೆ. ವ್ಯಾಪಾರಿಗಳು ಬಂಡವಾಳ ಹೂಡಿ ಪಟಾಕಿಗಳನ್ನು ತಂದಿದ್ದಾರೆ. ಎಲ್ಲರೂ ಸಣ್ಣ ಪುಟ್ಟ ವ್ಯಾಪಾರಿಗಳಿದ್ದಾರೆ ಅವರಿಗಾಗುವ ನಷ್ಟ ಭರಿಸುವುದು ಯಾರು ಎಂದರು.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರು 6 ಲಕ್ಷ ದೀಪಗಳನ್ನು ಹಚ್ಚುತ್ತಿದ್ದಾರೆ. ಇಲ್ಲಿನ ಸರ್ಕಾರ ಏನು ಮಾಡಲು ಹೊರಟಿದೆ? ಹಿಂದೂಗಳ ಹಬ್ಬ ಅಥವಾ ಚಿಕ್ಕಮಗಳೂರಿನ ದತ್ತಪೀಠ ಅಭಿಯಾನಕ್ಕೆ ಧಕ್ಕೆ ತರಬಾರದು ಎಂದರು.
ನಿನ್ನೆ ಚುನಾವಣೆ ಫಲಿತಾಂಶ ಬಂದಾಗ ಸಾಕಷ್ಟು ಪಟಾಗಿ ಸಿಡಿಸಿದ್ದಾರೆ. ಅವರಿಗೆ ಯಾರೂ ಏಕೆ ಕೇಳಲಿಲ್ಲ ಎಂದ ಅವರು, ರಕ್ತ ವಿಲ್ಲದ ಬಕ್ರೀದ್, ಶಬ್ಧವಿಲ್ಲದ ಶುಕ್ರವಾರವನ್ನು ಆಚರಿಸುವುದಾದರೆ ಪಟಾಕಿ ಇಲ್ಲದ ದೀಪಾವಳಿ ಆಚರಿಸಲು ನಾವು ಸಿದ್ಧ ಎಂದರು.
ದತ್ತಪೀಠದ ಸಮಸ್ಯೆಯನ್ನು ಬಗೆಹರಿಸಲು ಬಿಜೆಪಿ ಸರ್ಕಾರಕ್ಕೆ ಅವಕಾಶವಿದೆ. ಅದನ್ನು ಯಾವಾಗ ಮಾಡುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸುತ್ತೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss