ಚಿಕ್ಕಮಗಳೂರು:
ದತ್ತಮಾಲೆ ಅಭಿಯಾನದ ಅಂಗವಾಗಿ ಶ್ರೀರಾಮಸೇನೆ ಸಂಘಟನೆಯ ಮಾಲಾಧಾರಿಗಳು ಬುಧವಾರ ನಗರದಲ್ಲಿ ಭಿಕ್ಷಾಟನೆ ನಡೆಸಿ ಪಡಿ ಸಂಗ್ರಹಿಸಿದರು.
ನಿವಾಸಿಗಳು ಅಕ್ಕಿ, ಬೆಲ್ಲ, ಬೇಳೆ ಸೇರಿದಂತೆ ಇತರೆ ದವಸ, ಧಾನಗಳನ್ನೊಳಗೊಂಡ ಪಡಿಯನ್ನರ್ಪಿಸಿದರು.
ಈ ವೇಳೆ ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ದತ್ತಾತ್ರೇಯ ಗುರುಗಳು ಆಧ್ಯಾತ್ಮಿಕ ಉನ್ನತಿ ಸಾಧಿಸುವ ಸಲುವಾಗಿ ಭಿಕ್ಷಾಟನೆಯನ್ನು ವಿಶೇಷವಾಗಿ ಪರಿಗಣಿಸಿದ್ದರು. ಈ ಹಿನ್ನೆಲೆಯಲ್ಲಿ ನಾವು ಭಿಕ್ಷಾಟನೆ ನಡೆಸುತ್ತಿದ್ದೇವೆ. ದತ್ತಪೀಠದ ವಿಚಾರದಲ್ಲಿ ನಿರಂತರ ಸಂಘರ್ಷ ನಡೆಯುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ದತ್ತಪೀಠದ ಆವರಣದಲ್ಲಿ ಧ್ವನಿವರ್ಧಕಗಳನ್ನು ಕಟ್ಟಿ ಆಜಾನ್ ಕೂಗುತ್ತಿದ್ದುದು ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ನಿನ್ನೆ ಈ ವಿಚಾರ ನಮ್ಮ ಗಮನಕ್ಕೆ ಬಂದು ಪ್ರತಿಭಟನೆ ನಡೆಸಿದ್ದೇವೆ. ಈ ವಿಷಯವನ್ನು ಇಂದೇ ಸಂಜೆ ನಗರದಲ್ಲಿ ನಮ್ಮ ಸಂಘಟನೆಯ ರಾಜ್ಯ ಪ್ರಮುಖರ ಸಭೆಯಲ್ಲಿ ಮಂಡಿಸಲಾಗುವುದು. ನಂತರ ಮುಂದಿನ ಹೋರಾಟದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜಿಲ್ಲಾಡಳಿತ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎನ್ನುವಂತೆ ನಡೆದುಕೊಳ್ಳುವುದು ಸರಿಯಲ್ಲ ಎಂದರು.
ನವೆಂಬರ್ 25 ರಂದು ಕೊರೋನಾ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಿಂದ ಸೀಮಿತ ಸಂಖ್ಯೆಯಲ್ಲಿ ದತ್ತಪೀಠಕ್ಕೆ ತೆರಳಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿತ್ತು. ಹೊರಗಿನಿಂದಲೂ ಬಹಳಷ್ಟು ಜನರು ಬರುವವರಿದ್ದಾರೆ ಎಂದರು.
ಕೋವಿಡ್-19 ನಿಯಮಗಳು ಜಾರಿಯಲ್ಲಿರುವುದರಿಂದ ಹಾಗೂ ಜನರ ಆರೋಗ್ಯದ ದೃಷ್ಠಿಯಿಂದ ಪ್ರತಿ ವರ್ಷ ನಗರದಲ್ಲಿ ನಡೆಯುತ್ತಿದ್ದ ಶೋಭಾ ಯಾತ್ರೆ ಮತ್ತು ಧಾರ್ಮಿಕ ಸಭೆಯನ್ನು ಈ ಬಾರಿ ರದ್ದು ಪಡಿಸಲಾಗಿದೆ. ನೇರವಾಗಿ ಪೀಠಕ್ಕೆ ತೆರಳುತ್ತೇವೆ. ಅಲ್ಲಿ ಪೂಜಾ ಪುನಸ್ಕಾರಗಳು, ಧಾರ್ಮಿಕ ಕಾರ್ಯಕ್ರಮ, ಹೋಮ, ಹವನಗಳನ್ನು ನಡೆಸಲಾಗುವುದು ಎಂದರು.
ಬೆಳಗ್ಗೆ 8 ಕ್ಕೆ ನಗರದ ಶಂಕರ ಮಠದಲ್ಲಿ ಪ್ರಮುಖರೆಲ್ಲರೂ ಸೇರುತ್ತೇವೆ. ಅಲ್ಲಿಂದ ನೇರವಾಗಿ ಪೀಠಕ್ಕೆ ತೆರಳುತ್ತೇವೆ ಎಂದು ಹೇಳಿದರು.