Saturday, July 2, 2022

Latest Posts

ದತ್ತ ಜಯಂತಿ ಸಂಭ್ರಮ: ವಿಜೃಂಭಣೆಯಿಂದ ನಡೆಯಿತು ಸಂಕೀರ್ತನಾ ಯಾತ್ರೆ

ಹೊಸದಿಗಂತ ವರದಿ, ಚಿಕ್ಕಮಗಳೂರು:

ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ದತ್ತ ಜಯಂತಿ ಅಂಗವಾಗಿ ಮಂಗಳವಾರ ನಗರದಲ್ಲಿ ವಿಜೃಂಭಣೆಯ ಸಂಕೀರ್ತನಾ ಯಾತ್ರೆ ನಡೆಯಿತು.
ಆರ್‍ಜಿ ರಸ್ತೆಯ ಶ್ರೀ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಬಜರಂಗದಳದ ರಾಜ್ಯ ಸಹ ಸಂಯೋಜಕ ಸೂರ್ಯನಾರಾಯಣ, ಶಾಸಕರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಮತ್ತಿತರರ ಸಮ್ಮುಖದಲ್ಲಿ ಅರ್ಚಕರಾದ ಚಂದ್ರು ಭಟ್ರು ಅವರು ದತ್ತಾತ್ರೇಯರ ಉತ್ಸವ ಮೂರ್ತಿಗೆ ಮಹಾ ಮಂಗಳಾರತಿ ನೆರವೇರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು.
ಕೋವಿಡ್ ನಿಯಮಗಳ ಹಿನ್ನೆಲೆಯಲ್ಲಿ ಈ ಬಾರಿ ಶೋಭಾ ಯಾತ್ರೆಗೆ ಬದಲಾಗಿ ಕೇವಲ ದತ್ತ ಮಾಲಾಧಾರಿಗಳನ್ನೊಳಗೊಂಡ ಸಂಕೀರ್ತನಾ ಯಾತ್ರೆ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ನೂರಾರು ಸಂಖ್ಯೆಯ ಮಾಲಾಧಾರಿಗಳು ಮಾತ್ರ ಆರಂಭದಲ್ಲಿ ಮೆರವಣಿಗೆ ಆರಂಭಿಸಿದರು. ಆದರೆ ಕೆಲವೇ ಹೊತ್ತಿನಲ್ಲಿ ಕೇಸರಿ ರುಮಾಲು, ಶಾಲು, ಪೇಟಗಳನ್ನು ಧರಿಸಿದ ಸಹಸ್ರಾರು ಯುವಕ, ಯುವತಿಯರು, ಮಹಿಳೆಯರು ಸ್ವಯಂಪ್ರೇರಿತರಾಗಿ ಮೆರವಣಿಗೆಯಲ್ಲಿ ಸೇರಿಕೊಂಡ ಪರಿಣಾಮ ಬಸವನಹಳ್ಳಿ ಮುಖ್ಯ ರಸ್ತೆ ಹಾಗೂ ಎಂಜಿ ರಸ್ತೆಗಳಲ್ಲಿ ಕೇಸರಿ ಕಲರವ ರಾರಾಜಿಸಲಾರಂಭಿಸಿತು.
ಮಾಲಾಧಾರಿಗಳು ಸಂಕೀರ್ತನೆ ಮಾಡುತ್ತ ಹೆಜ್ಜೆ ಹಾಕಿದರೆ ಸಹಸ್ರಾರು ಸಂಖ್ಯೆಯ ಭಕ್ತರು ಬೃಹತ್ ಭಗವಾಧ್ವಜಗಳನ್ನು ಬೀಸುತ್ತಾ ದತ್ತಪೀಠ ನಮ್ಮದು, ಪೀಠದಲ್ಲೇ ಮಂದಿರ ಕಟ್ಟುವೆವು ಎನ್ನುವ ಘೋಷಣೆಗಳನ್ನು ಕೂಗಿದರು.
ಉದಯ ಸಿಂಹ ಅವರ ನೇತೃತ್ವದಲ್ಲಿ ಮಹಿಳಾ ಭಜನಾ ತಂಡ, ಜಿ.ಪಂ., ತಾ.ಪಂ. ಸದಸ್ಯರು, ಹಿಂದೂಪರ ಸಂಘಟನೆಗಳ ಮಹಿಳೆಯರು, ಯುವತಿಯರ ತಂಡ ಜೈಕಾರಗಳನ್ನು ಕೂಗುತ್ತಾ ಮೆವಣಿಗೆಗೆ ಮೆರಗು ತುಂಬಿದರು.
ಕೊರೋನಾ ಮುಂಜಾಗ್ರತೆ ಹಿನ್ನೆಲೆಯಲ್ಲಿ ಈ ಬಾರಿ ದತ್ತಾತ್ರೇಯರ ಉತ್ಸವ ಮೂರ್ತಿ ಮತ್ತು ಮಂಗಳವಾದ್ಯವನ್ನು ಹೊರತು ಪಡಿಸಿ ಇನ್ನಾವುದೇ ಸಾಂಸ್ಕೃ ತಿಕ ಕಲಾ ತಂಡಗಳಾಗಲಿ, ಡಿಜೆಯಂತಹ ಸಂಗೀತ ಸಾಧನಗಳಾಗಲಿ ಇರದಿದ್ದರೂ ಅನಿರೀಕ್ಷಿತವಾಗಿ ಆಗಮಿಸಿದ ಭಕ್ತರ ದೊಡ್ಡ ದಂಡು ಇಡೀ ಮೆರವಣಿಗೆಯನ್ನು ಶೋಭಾಯಾತ್ರೆಯಂತೆಯೇ ಪರಿವರ್ತಿಸಿತು.
ನಿರೀಕ್ಷೆ ಮೀರಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು. ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸವಾರರು ಪರದಾಡಬೇಕಾಯಿತು.
ಸಂಜೆ 7 ಕ್ಕೆ ಮೆರವಣಿಗೆ ಆಜಾದ್ ವೃತ್ತಕ್ಕೆ ಸೇರುತ್ತಿದ್ದಂತೆ ಮಹಾ ಮಂಗಳಾರತಿ ನೆರವೇರಿಸುವ ಮೂಲಕ ಯಾತ್ರೆ ಸಮಾಪನಗೊಂಡಿತು.
ಬಜರಂಗದಳ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ, ಜಿಲ್ಲಾ ಸಂಚಾಲಕ ಶಶಾಂಕ್, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಸೇರಿದಂತೆ ಬಿಜೆಪಿ ಮುಖಂಡರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss