ಚಿತ್ರದುರ್ಗ: ಲಾಕ್ಡೌನ್ ಅವಧಿಯಲ್ಲಿ ತೀವ್ರ ಸಂಕಷ್ಟ ಅನುಭವಿಸಿ ಸರ್ಕಾರದ ಪರಿಹಾರಕ್ಕೆ ಮೊರೆಯಿಟ್ಟಿದ್ದ ಹೂ ಬೆಳೆಗಾರರನ್ನು ಪುಷ್ಪ ಕೃಷಿ ಈಗ ಕೈಹಿಡಿಯುತ್ತಿದೆ. ಮಾರುಕಟ್ಟೆಯಲ್ಲಿ ಹೂಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಬೆಲೆ ನಿಧಾನಗತಿಯಲ್ಲಿ ಹೆಚ್ಚಾಗುತ್ತಿದೆ. ಇದರಿಂದ ರೈತರ ಮೊಗದಲ್ಲಿ ಕೊಂಚ ಮಂದಹಾಸ ಮೂಡುವಂತೆ ಮಾಡಿದೆ.
ಪ್ರಸ್ತುತ ಜಿಲ್ಲೆಯಲ್ಲಿ ೨,೨೨೩ ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕಳೆದ ಒಂದೆರಡು ತಿಂಗಳ ಹಿಂದೆ ನಿರಂತರವಾಗಿ ಸುರಿದ ಮಳೆ ಹೂವು ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿ ಉಂಟು ಮಾಡಿತ್ತು. ಇದರಿಂದ ಮತ್ತೆ ಆತಂಕಕ್ಕೆ ಸಿಲುಕಿದ್ದ ರೈತರಿಗೆ ಈಗ ಹೂವಿನ ಬೆಳೆ ಹೆಚ್ಚಳವಾಗಿರುವುದು ನಿಟ್ಟುಸಿರುವ ಬಿಡುವಂತಾಗಿದೆ. ಇನ್ನೇನು ದಸರಾ ಹಾಗೂ ದೀಪಾವಳಿ ಹಬ್ಬಗಳು ಸನ್ನಿಹಿತವಾಗಿದ್ದು, ಹೂ ಬೆಳೆಗಾರರಲ್ಲಿ ಹೊಸ ಭರವಸೆ ಮೂಡುವಂತಾಗಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಂತಿ ಹೂವನ್ನು ಬೆಳೆಯಲಾಗುತ್ತದೆ. ಹಲವು ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಹೂವುಗಳನ್ನು ಬೆಳೆಯಲಾಗುತ್ತಿದೆ. ವರ್ಷ ಪೂರ್ತಿ ಕಷ್ಟಪಟ್ಟು ಪುಷ್ಪ ಕೃಷಿ ಮಾಡಿದರೂ ಕೈಗೆ ಸಿಗುವುದು ಅಷ್ಟಕಷ್ಟೆ. ಆದರೆ ದಸರಾ, ದೀಪಾವಳಿ ಹಬ್ಬ ಬಂದಾಗ ಹೂವಿಗೆ ಕೊಂಚ ಬೆಲೆ ಬರುತ್ತದೆ. ಈ ಬಾರಿ ಅಧಿಕ ಮಾಸ ಬಂದಿದ್ದರಿಂದ ದಸರಾ ಮಹೋತ್ಸವ ಒಂದು ತಿಂಗಳು ಮುಂದೆ ಹೋಗಿದೆ. ಆದಾಗ್ಯೂ ಹೂ ಬೆಳೆಗಾರರು ಒಂದಷ್ಟು ಹಣ ಕೈ ಸೇರುವ ನಿರೀಕ್ಷೆಯಲ್ಲಿದ್ದಾರೆ.
ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ಹೂವಿನ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ, ಹುಣಸೆಕಟ್ಟೆ, ಕುರುಮರಡಿಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೂವುಗಳನ್ನು ಈ ಎಲ್ಲ ಹೂ ಬೆಳೆಗಾರರು ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಯುಗಾದಿ ಹಬ್ಬಕ್ಕೂ ಮೊದಲೇ ಲಾಕ್ಡೌನ್ ಜಾರಿಯಾಗಿದ್ದರಿಂದ ಹೂವಿಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಆದರೂ, ಹೂ ಬೆಳೆಯುವುದನ್ನು ಬಿಡಲಿಲ್ಲ. ಈಗ ದಸರಾ, ದೀಪಾವಳಿ ಸಂದರ್ಭದಲ್ಲಿ ಹೂವಿಗೆ ಲಾಭ ದೊರೆಯಲಿದೆ. ಉತ್ತಮ ಬೆಲೆ ದೊರೆಯಲಿದೆ.
ಕಳೆದ ಮೂವತ್ತು ವರ್ಷಗಳಿಂದ ಹೂವು ಬೆಳೆಯುತ್ತಿದ್ದೇನೆ. ದಾವಣಗೆರೆ, ಬೆಂಗಳೂರು, ಚಿತ್ರದುರ್ಗ ಹೂವಿನ ಮಾರುಕಟ್ಟೆಗೆ ಕೊಂಡೊಯ್ಯುತ್ತೇನೆ. ಸದ್ಯದಲ್ಲಿ ಖರ್ಚು ಕಳೆದು ಒಂದಷ್ಟು ಹಣ ಕೈಗೆ ಸಿಗುತ್ತಿದೆ. ಅಮವಾಸ್ಯೆ ಕಳೆದು ದಸರಾ ಹಬ್ಬ ಸಮೀಪಿಸಿದರೆ ಹೂವಿನ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹಿರಿಯೂರು ತಾಲೂಕಿನ ಹೋ.ಚಿ. ಬೋರಯ್ಯ ಬಡಾವಣೆಯ ಹೂ ಬೆಳೆಗಾರ ಚನ್ನಕೇಶವ.
ಲಾಕ್ಡೌನ್ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಯಿತು. ಇದರಿಂದ ಹೂವಿನ ಬೆಳೆಯೇ ಬೇಡ ಎನ್ನುವಷ್ಟ ಬೇಸರ ಮೂಡಿತ್ತು. ಆದರೂ ನಂತರದ ದಿನಗಳಲ್ಲಿ ಸೇವಂತಿ, ಚಂಡು ಹೂ, ಕನಕಾಂಬರ ಸಸಿ ಹಾಕಿದೆ. ಸೆಪ್ಟೆಂಬರ್ ತಿಂಗಳಿನಿಂದ ಹೂ ಬಿಡಲಾರಂಭಿಸಿದೆ. ಎರಡು ಎಕರೆಯಲ್ಲಿ ಹೂವಿನ ಬೆಳೆ ಇದೆ. ಮುಂದಿನ ದಿನಳಲ್ಲಿ ಲಾಭ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದ ರೈತ ಪಿ.ಜಿ.ಶ್ರೀನಿವಾಸ್.
ಜಿಲ್ಲೆಯಲ್ಲಿ ಬೆಳೆಯುವ ಹೂವಿನ ಬೆಳೆಗಳ ಹೆಕ್ಟೇರ್ವಾರು ವಿಸ್ತೀರ್ಣ : ಸೇವಂತಿ – ೧೦೫೯, ಸುಗಂಧರಾಜ – ೫೬೨, ಚೆಂಡು ಹೂ – ೨೦೭, ಮಲ್ಲಿಗೆ – ೧೫೫, ಕನಕಾಂಬರ – ೧೨೧, ಗುಲಾಬಿ – ೪೮, ಆಸ್ಟರ್ – ೩೮ ಹಾಗೂ ಇತರೆ – ೨೭, ಒಟ್ಟು – ೨,೨೨೩ ಹೆಕ್ಟೇರ್ನಲ್ಲಿ ವಿವಿಧ ಬಗೆಯ ಹೂವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ.