Wednesday, June 29, 2022

Latest Posts

ದಸರಾ ಪ್ರಾಧಿಕಾರ ರಚನೆ ಪ್ರಸ್ತಾಪ ಸರ್ಕಾರದ ಮುಂದಿದ್ದು ಈ ಬಗ್ಗೆ ಗಮನಹರಿಸಲಾಗುವುದು: ಸಚಿವ ಎಸ್.ಟಿ.ಸೋಮಶೇಖರ್

ಹೊಸ ದಿಗಂತ ವರದಿ, ಮೈಸೂರು:

ದಸರಾ ಪ್ರಾಧಿಕಾರ ರಚನೆ ಪ್ರಸ್ತಾಪ ಸರ್ಕಾರದ ಮುಂದಿದೆ. ಈ ಬಗ್ಗೆಯೂ ಗಮನಹರಿಸಲಾಗುವುದು ಎಂದು ಸಹಕಾರ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಶನಿವಾರ ನಗರದ ಕಲಾಮಂದಿರದಲ್ಲಿ ನಡೆದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು ಹಾಗೂ ಮೈಸೂರು ದಿ ಟೂರಿಸ್ಟ್ ಪ್ಯಾರಡೈಸ್ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ಸುತ್ತಮುತ್ತ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಪ್ರಸಿದ್ಧ ತಾಜ್‌ಮಹಲ್ ಜೊತೆ ಜೊತೆಗೆ ಮೈಸೂರು ಅರಮನೆ ವೀಕ್ಷಿಸಲು ಹೆಚ್ಚಿನ ಪ್ರವಾಸಿಗರು ದೇಶ -ವಿದೇಶಗಳಿಂದ ಭೇಟಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ದಸರಾ ಆಚರಣೆ ಮೂಲಕ ಮೈಸೂರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ದಸರಾವನ್ನು ಇನ್ನೂ ಅದ್ದೂರಿಯಾಗಿ ಆಚರಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬೇಕಿದೆ ಎಂದು ಹೇಳಿದರು.
ದೇಶ ವಿದೇಶದ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಲು ಬಹು ಮುಖ್ಯವಾಗಿ ಬೇಕಾಗಿರುವ ರಸ್ತೆ ಸಂಪರ್ಕ, ರೈಲು ಹಾಗೂ ವಿಮಾನ ಸಂಪರ್ಕವು ಸಹ ಉತ್ತಮವಾಗಿದೆ. ಉಡಾನ್ ಆದ ಮೇಲೆ ಹೆಚ್ಚು ಜನರು ವಿಮಾನ ಸೇವೆ ಬಳಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಇದು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಯಾದಾಗ ಮಾತ್ರ ಇಲ್ಲಿನ ಹೊಟೇಲ್‌ಗಳು ಹಾಗೂ ಇನ್ನಿತರ ವಾಣಿಜ್ಯ ವಹಿವಾಟುಗಳು ಪ್ರಗತಿ ಸಾಧಿಸಲು ಸಾಧ್ಯ. ಮೈಸೂರು ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಸಂಬoಧಿಸಿದoತೆ ವಿವಿಧ ಸಂಘಟನೆಗಳು ತಮ್ಮ ಮನವಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುತ್ತಾರೆ, ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಲ್ಲಿನ ಪ್ರವಾಸೋದ್ಯಮ, ಕೈಗಾರಿಕೋದ್ಯಮ ಸೇರಿದಂತೆ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಸದಾ ಮುಂದಿದೆ. ತಾವೂ ಸಹ ಹೆಚ್ಚಿನ ಸಹಕಾರವನ್ನು ಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ಐತಿಹಾಸಿಕ ಹಿನ್ನೆಲೆ ಇರುವ ಮೈಸೂರು ನಗರದ ಪ್ರವಾಸಿ ತಾಣಗಳನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರು ಬರೆದಿರುವ “ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು” ಕನ್ನಡ ಹಾಗೂ ಇಂಗ್ಲಿಷ್ ಅವತರಣಿಕೆಯ ಪುಸ್ತಕಗಳು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.
ಮೈಸೂರು ನಗರವು ಇಡೀ ದೇಶದಲ್ಲಿ ಮೈಸೂರು ಸ್ವಚ್ಛ ನಗರವೆಂಬ ಕೀರ್ತಿಗೆ ಭಾಜನವಾಗಿರುವುದು ಮಾತ್ರವಲ್ಲದೆ ಸುಂದರ ನಗರ, ಪಾರಂಪರಿಕ ನಗರ, ಪ್ರವಾಸಿಗರ ಸ್ವರ್ಗ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಮಾಜಿ ಶಾಸಕ ವಾಸು, ಹಿರಿಯ ಪತ್ರಕರ್ತರು, ಲೇಖಕರಾದ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪುಸ್ತಕ ಲೋಕಾರ್ಪಣೆ
ಹಿರಿಯ ಪತ್ರಕರ್ತರು, ಲೇಖಕರಾದ ಅಂಶಿ ಪ್ರಸನ್ನಕುಮಾರ್ ಅವರು ರಚಿಸಿದ “ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು ಹಾಗೂ ಮೈಸೂರು ದಿ ಟೂರಿಸ್ಟ್ ಪ್ಯಾರಡೈಸ್” ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಅಂಶಿ ಪ್ರಸನ್ನ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss