spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಾಳಿಕೋರ ‘ಕ್ರಿಮಿ’ನಲ್, ಮಿಡತೆಯ ವಿಚಾರಣೆ

- Advertisement -Nitte

ಈ ಭೂಮಿಯ ಮೇಲೆ ವಾಸವಾಗಿರುವ ಇತರ ಜೀವಿಗಳ ಮೇಲೆ ಮನಸೋಯಿಚ್ಛೆ ದಾಳಿ ಮಾಡುವ ಚಾಳಿ ಹೊಂದಿರುವ ಜೀವಿಗಳಲ್ಲಿ ಮನುಷ್ಯನೂ ಒಬ್ಬ. ಆದರೆ ಬುದ್ಧಿಶಕ್ತಿಯುಳ್ಳ ಏಕಮಾತ್ರ ದಾಳಿಕೋರನೆಂದರೆ ಮನುಷ್ಯ! ನೆಲ, ಜಲ, ಪ್ರಾಣಿ, ಪಕ್ಷಿ, ಸಸ್ಯ ಹೀಗೆ ಪ್ರತಿಯೊಂದರ ಮೇಲೆಯೂ ಆತ ದಾಳಿ ಮಾಡುತ್ತಲೇ ಬಂದಿದ್ದಾನೆ. ಆದರೆ ಚಿರತೆ ದಾಳಿ, ಹುಲಿ ದಾಳಿ ಇತ್ಯಾದಿಗಳು ಭಾರೀ ಸುದ್ದಿಯಾಗುತ್ತವೆ ಮತ್ತು ಮನುಷ್ಯರೂ ಅದರ ವಿರುದ್ಧ ಸೆಟೆದುನಿಲ್ಲುತ್ತಾರೆ. ಅಂತೆಯೇ ಇವರು ಮಾಡುವ ವಿವಿಧ ದಾಳಿಗಳ ವಿರುದ್ಧ ದಾಳಿಗೀಡಾದವರು ತಿರುಗೇಟು ನೀಡಲು ನಿಂತರೆ ಮನುಷ್ಯ ಜೀವಿಯ ಪಾಡು ಹರೋಹರ!

ಅದೇನೇ ಇರಲಿ ದಾಳಿಯ ಸ್ವರೂಪ ಮಾತ್ರ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಬಂದಿದೆ. ಸದ್ಯ ಸಣ್ಣ ಹುಳವೊಂದು ತನ್ನ ದಾಳಿಯ ಮೂಲಕ ಅಲ್ಲಲ್ಲಿ ಮನುಷ್ಯರನ್ನು ಅಕ್ಷರಶಃ ಕಂಗೆಡಿಸಿದೆ. ಹೀಗೆ ಮನುಷ್ಯರ ಕೋಟೆಗೇ ಲಗ್ಗೆಯಿಟ್ಟಿರುವ ಆ ಕೀಟವೇ ‘ಮಿಡತೆ’. ಆಫ್ರಿಕನ್ ರಾಷ್ಟ್ರಗಳು, ಭಾರತದ ಕೆಲವು ಪ್ರದೇಶಗಳು, ಪಾಕಿಸ್ತಾನ, ಚೀನಾವೂ ಸೇರಿದಂತೆ ಕೆಲವು ದೇಶಗಳು ಮಿಡತೆಗಳ ದಾಳಿಗೆ ಸಿಕ್ಕು ನಲುಗಿವೆ. ಅದರಲ್ಲೂ ಪಾಕಿಸ್ತಾನವಂತೂ ‘ರಾಷ್ಟ್ರೀಯ ತುರ್ತು ಪರಿಸ್ಥಿತಿ’ಯನ್ನು ಘೋಷಿಸಿದೆ. ಅಷ್ಟರಮಟ್ಟಿಗೆ ಕೀಟಬಾಧೆ ಅವರನ್ನು ಕಾಡಿದೆ. ಹಾಗಾಗಿ ಎಲ್ಲಾ ಪ್ರಕರಣಗಳಲ್ಲೂ ನಡೆಯುವಂತೆ, ಈ ದಾಳಿಯ ಆರೋಪಿಯಾದ ಮಿಡತೆಯ ವಿಚಾರಣೆಯೂ ನಡೆಯಬೇಕಲ್ಲವೇ? ಹಾಗೊಂದು ‘ಕಾಲ್ಪನಿಕ’ ವಿಚಾರಣೆಯ ವಿವರಗಳು ಬಹಿರಂಗವಾಗಿವೆ. ಅದರ ಸಂಕ್ಷಿಪ್ತ ರೂಪ ಇಲ್ಲಿದೆ.

ಆರೋಪಿತ ಮಿಡತೆಯ ವಿಚಾರಣೆ ಸಂಪೂರ್ಣವಾಗಿ ಮುಚ್ಚಲ್ಪಟ್ಟ ಕೋಣೆಯಲ್ಲಿ ನಡೆಯುತ್ತಿದೆ. ಅದರೊಳಗೆ ಇಟ್ಟ ಟೇಬಲ್‌ನ ಒಂದು ಅಂಚಿಗೆ ಮಿಡತೆ ಕುಳಿತಿದ್ದರೆ, ಇನ್ನೊಂದು ಅಂಚಿಗೆ ತನಿಖಾಧಿಕಾರಿ. ವಿಚಾರಣೆಯ ಪಾರದರ್ಶಕತೆಗಾಗಿ ಅದರ ವೀಡಿಯೋ ಚಿತ್ರೀಕರಣಕ್ಕೆಂದು ಒಬ್ಬ ವೀಡಿಯೋಗ್ರಾಫರ್, ತನ್ನ ಕ್ಯಾಮೆರಾದೊಂದಿಗೆ ಸಿದ್ಧವಾಗಿದ್ದಾನೆ. ಇವರನ್ನು ಹೊರತುಪಡಿಸಿದಂತೆ ಬೇರೆ ಯಾರಿಗೂ ಅದರೊಳಗೆ ಪ್ರವೇಶವಿಲ್ಲ. ತುಸು ಧೂಳು ಮಿಶ್ರಿತ ಮಬ್ಬು ಬೆಳಕಿನ ಕೋಣೆಯೊಳಗೆ ಸಂಪೂರ್ಣ ಮೌನ ನೆಲೆಸಿತ್ತು.

ತನಿಖಾಧಿಕಾರಿ ಗಂಭೀರ ಧ್ವನಿಯಲ್ಲಿ ವಿಚಾರಣೆ ಆರಂಭಿಸಿದ. ಮಿಡತೆಯನ್ನು ಉದ್ದೇಶಿಸಿ- “ನಿನ್ನ ವಿರುದ್ಧ ಹೀಗೊಂದು ಗಂಭೀರವಾದ ಆರೋಪವಿದೆ. ಈ ಬಗ್ಗೆ ಏನನ್ನು ಹೇಳಲು ಇಚ್ಛಿಸುತ್ತೀಯಾ?” ಎಂದ.

ಮಿಡತೆ ತನ್ನ ಸುದೀರ್ಘ ಮೌನವನ್ನು ಮುರಿಯುತ್ತಾ, “ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾವು ಯಾರ ವಿರುದ್ಧವೂ ದಾಳಿ ಮಾಡಿಲ್ಲ. ದಾಳಿ ಮಾಡುವುದು, ದ್ವೇಷ ಸಾಧಿಸುವುದು, ತೊಂದರೆ ನೀಡುವುದೆಲ್ಲ ನಮಗೆ ಹೇಳಿಸಿದ್ದಲ್ಲ. ನಾವೇನಿದ್ದರೂ ನಿರುಪದ್ರವಿ ಜೀವಿಗಳು. ನಮ್ಮ ಜೀವನ ಕ್ರಮದಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿರುತ್ತೇವೆ. ಇದು ಕೂಡ ಹಾಗೆಯೇ.”

“ಹಾಗಾದರೆ ಕ್ರಿಮಿ ಆಗಿದ್ದ ನೀವು ಕ್ರಿಮಿನಲ್ ಆಗಿ ಬದಲಾಗಿಲ್ಲವೇ?”, ಮುಂದುವರಿದು ಪ್ರಶ್ನಿಸಿದ ತನಿಖಾಧಿಕಾರಿ.
“ಖಂಡಿತ ಇಲ್ಲ. ನಾವು ಕ್ರಿಮಿಗಳಷ್ಟೇ. ಕ್ರಿಮಿನಲ್ ಚಟುವಟಿಕೆಗಳಲ್ಲಿ ನಮ್ಮ ಪಾಲ್ಗೊಳ್ಳುವಿಕೆ ಯಾವತ್ತಿದ್ದರೂ ನಲ್ ()”
“ಹಲವಾರು ಪ್ರದೇಶಗಳಲ್ಲಿ ನಿನ್ನವರಿಂದಾಗಿ ಸಾಕಷ್ಟು ಹಾನಿಯಾಗಿದೆ. ಅದನ್ನು ತಳ್ಳಿ ಹಾಕುವೆಯಾ ಹಾಗಾದರೆ?”
“ಖಂಡಿತ ನಮ್ಮಿಂದಾದ ಹಾನಿಯನ್ನು ನಮ್ಮಲ್ಲಿ ಯಾರೂ ಅಲ್ಲಗಳೆಯುತ್ತಿಲ್ಲ. ಆದರೆ ಅದು ಉದ್ಧೇಶಿತ ದಾಳಿಯಂತೂ ಅಲ್ಲ. ದಿನ ಬೆಳಗಾದರೆ ವಿವಿಧ ಬಗೆಯ ದಾಳಿಗಳಲ್ಲಿ ತೊಡಗಿಸಿಕೊಂಡಿರುವುದೇ ಮನುಷ್ಯರು. ಈಟಿ, ಭರ್ಜಿಗಳ ದಾಳಿ ಮುಗಿದು ಮದ್ದು ಗುಂಡುಗಳ ದಾಳಿಗೆ ಹೊರಳಿ, ಸದ್ಯ ವೈರಸ್ ದಾಳಿ, ಸೈಬರ್ ದಾಳಿ ಹಾಗೂ ಡ್ರೋಣ್ ದಾಳಿ ಹೀಗೆ ಏನೇನೋ ದಾಳಿಗಳನ್ನು ಮುಟ್ಟಿದ್ದಾರೆ. ಹಾಗಾಗಿ ಅವರಿಗೆ ನಮ್ಮದೂ ಕೂಡಾ ದಾಳಿಯೆನಿಸುತ್ತಿದೆ.” ಅಸಮಾಧಾನದ ದನಿಯಲ್ಲಿ ಹೇಳಿತು ಮಿಡತೆ.

ಒಂದು ಗುಟುಕು ನೀರು ಕುಡಿದ ತನಿಖಾಧಿಕಾರಿ ಮಿಡತೆಗೆ ನೀರು ಬೇಕೇ ಎಂದು ಕೇಳಿ ತನ್ನ ಬತ್ತಳಿಕೆಯಲ್ಲಿದ್ದ ಮುಂದಿನ ಪ್ರಶ್ನೆಯನ್ನು ಪ್ರಯೋಗಿಸಿದ.

“ಇರಬಹುದು, ಅದು ಉದ್ದೇಶಪೂರ್ವಕ ದಾಳಿಯಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ ಅಲ್ಲಿ ಆಗಿರುವ ಹಾನಿಯ ಅರಿವಿದೆಯೇ?”
“ಒಂದಷ್ಟು ಬೆಳೆಗಳು ಹಾನಿಯಾಗಿವೆ, ಟ್ರಾಫಿಕ್ ಜಾಮ್ ಉಂಟಾಗಿದೆ. ಜನರಿಗೆ ನಮ್ಮನ್ನು ನಿಯಂತ್ರಿಸಲಾಗುತ್ತಿಲ್ಲ. ಈ ಬಗೆಯ ವ್ಯತ್ಯಯಗಳು ಮನುಷ್ಯರಿಂದಲೂ ನಡೆಯುತ್ತಿವೆಯಲ್ಲವೇ?”
“ಅದು ಹೇಗೆ?”ಕುತೂಹಲದಿಂದ ಪ್ರತಿ ಪ್ರಶ್ನೆಯೆಸೆದ ತನಿಖಾಧಿಕಾರಿ.
“ಅವರೂ ಭಾರೀ ಸಂಖ್ಯೆಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋದಾಗ ಅಲ್ಲಿಯೂ ಈ ಬಗೆಯ ಎಲ್ಲಾ ತಾಪತ್ರಯಗಳು ಸೃಷ್ಟಿಯಾಗುತ್ತವೆ. ಅವರ ಮೇಲಿಲ್ಲದ ಕೋಪ, ಆರೋಪ ನಮ್ಮ ಮೇಲೇಕೆ?
ತನಿಖಾಧಿಕಾರಿ ತನ್ನ ವಿಚಾರಣೆಯ ದಿಕ್ಕನ್ನು ತುಸು ಬದಲಾಯಿಸಿ,
“ಹಾಗಾದರೆ ನಿನ್ನ ವರ್ಗದವರ ಹಿನ್ನೆಲೆಯೇನು ಹಾಗೂ ಮೂಲ ಎಲ್ಲಿ?” ಎಂದು ಕೇಳಿದ.
“ನಾವೆಲ್ಲ ಮೂಲತಃ ಮರುಭೂಮಿ ಪ್ರದೇಶಗಳ ಹಿನ್ನೆಲೆಯವರು. ಅಲ್ಲಿ ಒಮ್ಮೊಮ್ಮೆ ದೊಡ್ಡ ಸಂಖ್ಯೆಯಲ್ಲಿ ಮೇಲೇಳುವ ನಾವು ಹೀಗೆ ತಂಡಗಳಲ್ಲಿ ಒಂದೊಂದು ದಿಕ್ಕಿಗೆ ಪ್ರಯಾಣಿಸುತ್ತೇವೆ. ಆಫ್ರಿಕನ್ ದೇಶಗಳಿಂದ ಈಗ ಏಷ್ಯಾ ಖಂಡದತ್ತಲೂ ಮುಖ ಮಾಡಿದ್ದೇವೆ.”
ತನಿಖಾಧಿಕಾರಿ ತುಸು ನಿಷ್ಠೂರವಾಗಿಯೇ ಕೇಳಿದ. “ಆದರೂ ಇದರಿಂದ ಮಿಡತೆಗಳ ನಡತೆ ಮೇಲೆಯೇ ಸಂಶಯ ಹುಟ್ಟುವಂತಾಗಿದೆ. ಇನ್ಸೆಕ್ಟ್ ಆಗಿ ಹೀಗೆ ಜನರಿಗೆ ಉಪದ್ರವ ನೀಡುತ್ತಿರುವುದು ನಿಮ್ಮ ಕುಲಕ್ಕೇ ಇನ್ಸಲ್ಟ್ ಅಲ್ಲವೇ? ಅಂದ ಮೇಲೆ ಇದನ್ನೇಕೆ ಮಾಡಬೇಕು?”
“ನನಗೆ ತಿನ್ನಲು ರುಚಿ ರುಚಿಯಾದ ಓಟ್ಸ್ ಹಾಗೂ ಕಾರ್ನ್ ಪ್ಲೇಕ್ಸ್ ಬೇಕು. ಅದನ್ನು ಕೊಡಿಸಿದ್ರೆ ಮಾತ್ರ ಉತ್ತರಿಸುವೆ. ಇಲ್ಲವೆಂದಾದರೆ ವಿಚಾರಣೆಗೆ ಸಹಕರಿಸಲಾರೆ” ಕಡ್ಡಿ ಮುರಿದಂತೆ ಹೇಳಿತು ಮಿಡತೆ.

ಕೊನೆಗೂ ತನಿಖಾಧಿಕಾರಿಗಳು ಅವನ್ನೆಲ್ಲ ಏರ್ಪಾಟು ಮಾಡಿದರು. ಚೆನ್ನಾಗಿ ಮೆಲ್ಲಿದ ಮಿಡತೆ ತನ್ನ ಮಾತನ್ನು ಮುಂದುವರಿಸಿತು,

“ಇದರಲ್ಲಿ  ಇನ್ಸಲ್ಟ್ ನ ಪ್ರಶ್ನೆಯೇ ಬರುವುದಿಲ್ಲ. ನಮ್ಮ ನಡತೆಯ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಎಲ್ಲೆಡೆ ಇರುವುದು. ಹಾಗೆ ನೋಡಿದರೆ ಹ್ಯೂಮನ್ ಎಂದು ಕರೆಸಿಕೊಳ್ಳುವ ಮನುಷ್ಯರ ಮನಸ್ಸಿನಲ್ಲಿ ಹ್ಯುಮ್ಯಾನಿಟಿಗೆ ಜಾಗವೇ ಇರುವುದಿಲ್ಲ. ಆದರೂ ಅವರು ತಿದ್ದಿಕೊಳ್ಳಲಾರರು. ಆದರೆ ನಮಗೆ ಅಂಥ ಪರಿಸ್ಥಿತಿಯೇ ಬರುವುದಿಲ್ಲ. ಹಾಗಾಗಿ ನಾವು ನಿರಪರಾಧಿಗಳು.”
“ಹಾಗಾದರೆ ಈ ಬಗ್ಗೆ ನಿಮಗೆ ವಿಷಾದ ಇರಬೇಕಲ್ಲವೇ” ತನಿಖಾಧಿಕಾರಿ ಮರುಪ್ರಶ್ನಿಸಿದ.
“ನಮಗೇಕೆ ವಿಷಾದ. ಸದಾ ಬೇರೆಯವರಿಗೆ ತೊಂದರೆ ಕೊಡುವ ಮನುಷ್ಯ ಜೀವಿಗೆ ಸಣ್ಣ ಕೀಟವಾದ ನಾವು ಒಂದು ಮಟ್ಟಿಗಿನ ತಕ್ಕ ಶಾಸ್ತಿ ಮಾಡುತ್ತಿದ್ದೇವೆಂಬ ಸಮಾಧಾನ ಹಾಗೂ ನೆಮ್ಮದಿ ನಮ್ಮಲ್ಲಿದೆ.” ದೃಢವಾದ ಧ್ವನಿಯಲ್ಲಿ ಹೇಳಿತು ಮಿಡತೆ.

ಅಲ್ಲಿಗೆ ತನ್ನ ವಿಚಾರಣೆಯನ್ನು ನಿಲ್ಲಿಸಿದ ತನಿಖಾಧಿಕಾರಿ ತುಸು ಗೊಂದಲಕ್ಕೀ ಡಾದ. ಯಾವ ನಿರ್ಣಯಕ್ಕೆ ಬರಬೇಕೆಂದೇ ಆತನಿಗೆ ಗೊತ್ತಾಗಲಿಲ್ಲ. ಮಿಡತೆಯ ಮಾತಲ್ಲೂ ಹುರುಳಿದೆಯೆನಿಸಿತು. ಚಿರತೆ, ಹುಲಿಗಳು ಊರೊಳಗೆ ದಾಳಿಯಿಡುವ ಪ್ರಕರಣಗಳು, ಅದರ ಅಬ್ಬರದ ಮೀಡಿಯಾ ಕವರೇಜ್‌ಗಳು, ಮನುಷ್ಯರ ಹಿಂಸೆ ಹೀಗೆ ಎಲ್ಲವೂ ಒಮ್ಮೆಗೇ ನೆನಪಾದವು. ಆತ ಮಿಡತೆಯನ್ನು ಬಿಡಿಸಿ ಕಳಿಸಿದ. ಅತ್ತ ಮಿಡತೆಯ ವಿರುದ್ಧ ಪ್ರತಿದಾಳಿ ಮಾಡಲೆಂದು ಬಾತುಕೋಳಿಗಳ ‘ಸೇನೆ’ಯನ್ನು ಸಜ್ಜುಗೊಳಿಸಿರುವ ಬಗ್ಗೆ ‘ಬ್ರೇಕಿಂಗ್’ ನ್ಯೂಸ್ ಪ್ರಸಾರವಾಗುತ್ತಿತ್ತು.

ಓವರ್ಡೋಸ್: ಸಾಕಷ್ಟು ಹಾನಿಗೆ ಕಾರಣವಾಗಿರುವ ದಾಳಿಕೋರ ಮಿಡತೆಗಳಿಗೆ ಹೊಂದುವ ಮಾತು – ‘ಮೂರ್ತಿ ಚಿಕ್ಕದಾದರೂ (ಅಪ) ಕೀರ್ತಿ ದೊಡ್ಡದು’!

-ಸಂದೇಶ್ ನಾಯ್ಕ್ ಹಕ್ಲಾಡಿ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss