ದಾವಣಗೆರೆ: ಕೋವಿಡ್ನಿಂದ ಸಂಪೂರ್ಣ ಗುಣಮುಖರಾದ ಮೂವರು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ ಮಧ್ಯಾಹ್ನದವರೆಗೆ ಯಾವುದೇ ಹೊಸ ಪ್ರಕರಣ ವರದಿಯಾಗದಿರುವುದು ಜಿಲ್ಲೆಯ ಪಾಲಿಗೆ ಸಂತಸ ತಂದಿದೆ.
ಪಿ.585, ಪಿ.616 ಹಾಗೂ ಪಿ.635 ಸಂಖ್ಯೆಯ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಸ್ಟಾಫ್ ನರ್ಸ್ ಸಂಪರ್ಕದಿಂದ ಸೋಂಕು ತಗುಲಿದ್ದ ಈ ಎಲ್ಲರೂ ಬಾಷಾನಗರದ ನಿವಾಸಿಗಳಾಗಿದ್ದಾರೆ. ಮೇ 1ರಂದು ಕೊರೋನಾ ಪಾಸಿಟಿವ್ ದೃಢಪಟ್ಟ ನರ್ಸ್ನ 16 ವರ್ಷದ ಪುತ್ರ(ಪಿ.585), ಮೇ 4ರಂದು ಪಾಸಿಟಿವ್ ದೃಢಪಟ್ಟ 52 ವರ್ಷದ ಮಹಿಳೆ(ಪಿ.616), 11 ವರ್ಷದ ಬಾಲಕ(ಪಿ.635) ಗುಣಮುಖರಾದವರು.
ದಾವಣಗೆರೆ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾದ ಮೂವರು ಕೋವಿಡ್ ಸೋಂಕಿತರಿಗೆ ಜಿಲ್ಲಾಡಳಿತದಿಂದ ಹೂವು ನೀಡಿ ಶುಭ ಹಾರೈಸಲಾಯಿತು. ರೋಗಿಗಳ ಆರೈಕೆ ಮಾಡಿದ್ದ ವೈದ್ಯರು ಹಾಗೂ ನರ್ಸ್ ಗಳನ್ನೂ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಇನ್ನೂ ಮೂವರು ಸೋಂಕಿತರು ಗುಣಮುಖರಾಗಿ ಬಿಡುಗಡೆಗೆ ಸಿದ್ಧರಿದ್ದು, ಜಿಲ್ಲಾಡಳಿತದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.