Thursday, August 11, 2022

Latest Posts

ದಾವಣಗೆರೆ| ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬುಧವಾರ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಲಾಯಿತು. ನಗರದ ಶಾಬನೂರು ರಸ್ತೆಯ ಮಹಾನಂದಿ ಪೆಟ್ರೋಲ್ ಬಂಕ್ ಎದುರು ಜಮಾಯಿಸಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ, ಬೆಲೆ ಏರಿಕೆ ನೀತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಮಾತನಾಡಿ, ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕಚ್ಚಾ ತೈಲ ಬೆಲೆಯು ಹೆಚ್ಚಾಗಿದ್ದರೂ ಪೆಟ್ರೋಲ್ ಬೆಲೆ 80 ರೂ. ದಾಟಿರಲಿಲ್ಲ. ಈಗ ಕಚ್ಚಾ ತೈಲ ಬೆಲೆ ಅತ್ಯಂತ ಕಡಿಮೆಯಾಗಿದ್ದರೂ ಸಹ ದಿನದಿನಕ್ಕೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿ ನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಜನ ಸಾಮಾನ್ಯರು, ಬಡವರಿಗೆ ತೀವ್ರ ಸಂಕಷ್ಟ ಬಂದೊದಗಿದೆ. ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೇವಲ ಭಾಷಣ, ಘೋಷಣೆಗಳಿಂದ ಜನರ ಆರ್ಥಿಕ ಸಂಕಷ್ಟ ತಪ್ಪುವುದಿಲ್ಲ ಎಂಬ ಸತ್ಯವನ್ನು
ಕೇಂದ್ರ ಸರ್ಕಾರ ಅರಿಯಬೇಕಿದೆ. ಇನ್ನಾದರೂ ತೈಲ ಬೆಲೆ ಇಳಿಸುವ ಮೂಲಕ ಸರ್ಕಾರ ಜನರ ನೆರವಿಗೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದರು.
ಪಾಲಿಕೆ ಸದಸ್ಯ, ಮಾಜಿ ಉಪ ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ದಿನದಿನಕ್ಕೂ ತೈಲ ಬೆಲೆ ಏರಿಕೆಯಾಗುತ್ತಲೇ ಇದ್ದರೆ ಜನಸಾಮಾನ್ಯರ ಬದುಕು ದುರ್ಬರವಾಗುವ ದಿನಗಳು ದೂರವಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ಇನ್ನಾದರೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ಮೂಲಕ ಜನಹಿತ ಕಾಯಬೇಕು
ಎಂದು ಆಗ್ರಹಿಸಿದರು.
ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ, ಸದಸ್ಯರಾದ ದೇವರಮನೆ ಶಿವಕುಮಾರ, ಗಡಿಗುಡಾಳ ಮಂಜುನಾಥ, ಕಲ್ಲಹಳ್ಳಿ ನಾಗರಾಜ, ವಿನಾಯಕ ಪೈಲ್ವಾನ್, ಮುಖಂಡರಾದ ಸೋಮಲಾಪುರ ಹನುಮಂತಪ್ಪ, ಆಶಾ ಮುರುಳಿ, ಕೋಳಿ ಇಬ್ರಾಹಿಂ, ಮುಜಾಹಿದ್ ಪಾಷಾ, ಎಸ್.ಮಲ್ಲಿಕಾರ್ಜುನ, ಎಸ್.ಎಂ.ರುದ್ರೇಶ, ಹೆಚ್.ಜಯಪ್ಪ, ಕೆ.ಎಲ್.ಹರೀಶ ಬಸಾಪುರ, ಬಾತಿ ಶಿವಕುಮಾರ, ರಘು ದೊಡ್ಮನಿ, ಶಶಿಧರ , ದಾಕ್ಷಾಯಣಮ್ಮ, ರಾಜೇಶ್ವರಿ, ಗೀತಾ, ವಾಣಿ, ಎಸ್.ಕೆ.ಪ್ರವೀಣ ಕುಮಾರ, ಶಮಿ ದೇವರಹಟ್ಟಿ, ಸತೀಶ ಶ್ಯಾಗಲೆ, ಅಣಜಿ ಅಂಜಿನಪ್ಪ, ಆರೋಗ್ಯ ಸ್ವಾಮಿ, ಕಲ್ಪನಹಳ್ಳಿ ನಾಗರಾಜ, ಯುವರಾಜ, ಶಾಮನೂರು ಸುರೇಶ, ಮಲ್ಲಿಕಾರ್ಜುನ ಇಂಗಳೇಶ್ವರ, ಮಹಾವೀರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss