ದಾವಣಗೆರೆ: ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಸೋಂಕು ತಡೆಯಲು ಜನಪದರು ದೈವದ ಮೊರೆ ಹೋಗಿದ್ದಾರೆ. ಕಾಡದೆ ಕಾಪಾಡುವಂತೆ ಜನರ ನಿದ್ದೆಗೆಡಿಸಿರುವ ಮಹಾಮಾರಿಗೇ ಶರಣು ಹೋಗಿದ್ದಾರೆ.
ನಗರದ ಎಸ್ಓಜಿ ಕಾಲೋನಿ ನಿವಾಸಿಗಳು ಶುಕ್ರವಾರ ಕೊರೋನಮ್ಮಗೆ ಎಡೆ ಸಮರ್ಪಿಸುವ ಆಚರಣೆ ನಡೆಸಿದರು. ಹಿಂದೆಲ್ಲಾ ಪ್ಲೇಗಮ್ಮ, ದಡಾರಮ್ಮ, ಮೈಲಮ್ಮ, ಚಿಕನ್ ಗುನ್ಯಾ ಅಮ್ಮನನ್ನು ಎಡೆ ಮಾಡಿ ಕಳಿಸಿದ ರೀತಿಯಲ್ಲೇ ಈಗ ಕೊರೋನಮ್ಮಗೂ ಭಕ್ತಿ ಸಲ್ಲಿಸಿದರು. ಕಾಲೋನಿಯ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಜಾತಿ, ಪಂಥದ ಜನರೂ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಗಾಡಿಗಳಲ್ಲಿ ತುಂಬಿಕೊಂಡು ಬಂದಿದ್ದ ಹೋಳಿಗೆ ಎಡೆಯನ್ನು ಕೊರೋನಮ್ಮಗೆ ಅರ್ಪಿಸಿದ ಭಾವುಕ ಜನರು, ದೇವಿಗೆ ಎಡೆ ಮಾಡುವ ಮೂಲಕ ದೇಶ, ರಾಜ್ಯ, ಊರನ್ನು ಬಿಟ್ಟು ಆಚೆ ಹೋಗುವಂತೆ ಪ್ರಾರ್ಥಿಸಿದರು. ಕೊರೋನಾ ಮಹಾಮಾರಿಯಿಂದ ಜಿಲ್ಲೆ, ರಾಜ್ಯ, ದೇಶಕ್ಕೆ
ಮುಕ್ತಿ ಸಿಗಲಿ ಎಂಬುದಾಗಿ ಸರ್ವ ಜನಾಂಗದವರು ಬೇಡಿಕೊಂಡರು.