Thursday, August 18, 2022

Latest Posts

ದಾವಣಗೆರೆ| ಕೋವಿಡ್ ಕೇರ್ ಸೆಂಟರ್ ಸ್ಥಗಿತಕ್ಕೆ ಡಿಸಿ ಸೂಚನೆ: ಪರಿಸ್ಥಿತಿ ನೋಡಿಕೊಂಡು ಪುನರಾರಂಭಕ್ಕೆ ನಿರ್ಧಾರ

ದಾವಣಗೆರೆ:  ಕೋವಿಡ್ ಸೋಂಕಿತರಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಜಿಲ್ಲಾದ್ಯಂತ ತೆರೆಯಲಾಗಿದ್ದ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಲ್ಲಿನ ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸದ್ಯ 616 ಸಕ್ರಿಯ ಕೊರೋನಾ ಪಾಸಿಟಿವ್ ಪ್ರಕರಣಗಳಿವೆ. ಈ ಪೈಕಿ 131 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 412 ಜನ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಸದ್ಯ ಯಾವುದೇ ಕೊರೋನಾ ಪೀಡಿತರು ಈ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇಲ್ಲದ ಕಾರಣ ಅವುಗಳನ್ನು ಸ್ಥಗಿತಗೊಳಿಸಬೇಕು. ಜೊತೆಗೆ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿವಿಧ ಇಲಾಖಾ ಸಿಬ್ಬಂದಿಗಳನ್ನು ವಾಪಾಸ್ ಮಾತೃ ಇಲಾಖೆಗೆ ಕಳುಹಿಸಿಕೊಡಬೇಕೆಂದು ಸೂಚನೆ ನೀಡಿದರು.
ಮುಂದಿನ ಚಳಿಗಾಲದ ದಿನಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುವ ಸುಳಿವಿದ್ದು, ತಕ್ಷಣಕ್ಕೆ ಕೈಗೊಳ್ಳಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಹಾಗಾಗಿ ಮತ್ತೆ ಅಗತ್ಯ ಬಿದ್ದರೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು. ಎಲ್ಲಾ ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳು ತಮ್ಮಲ್ಲಿಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಬೇಕು. ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿದವರಿಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಎಲ್ಲಾ ರೀತಿಯ ವ್ಯಾಪಾರ ವಹಿವಾಟು ನಡೆಸುವ ಸಂಸ್ಥೆಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಸಾಕಷ್ಟು ಅರಿವು ಮೂಡಿಸಲಾಗಿದ್ದು, ಹೆಚ್ಚು ಜನಜಂಗುಳಿ ನಡುವೆ ವ್ಯಾಪಾರ ನಡೆಸುವುದು ಕಂಡುಬoದರೆ 2 ಬಾರಿ ನೋಟಿಸ್ ನೀಡಿ, 3ನೇ ಬಾರಿ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಸಲಾಗುವುದು. ಈ ಬಗ್ಗೆ ಸಂಬoಧಿಸಿದ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಬಗ್ಗೆ ಪ್ರತಿನಿತ್ಯ ವರದಿ ನೀಡಬೇಕು. ಲೋಪಕ್ಕೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಡಿಹೆಚ್ಓ ನಾಗರಾಜು, ಡಿಎಸ್ಓ ಡಾ.ರಾಘವನ್, ನಗರಾಭಿವೃದ್ದಿ ಕೋಶದ ಅಧಿಕಾರಿ ನಜ್ಮಾ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!