ದಾವಣಗೆರೆ: ರೈತರ ಬೆಳೆಗಳಿಗೆ ಸರ್ಕಾರ ನಿಗದಿಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ಖರೀದಿಸುವ ವರ್ತಕರು ಹಾಗೂ ದಲ್ಲಾಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ(ಪಕ್ಷಾತೀತ) ಹೊನ್ನಾಳಿ ತಾಲೂಕು ಘಟಕವು ಸೋಮವಾರ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ್ದ ಸಂಘಟನೆ ಮುಖಂಡರು, ಕಾರ್ಯಕರ್ತರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರವು 2020-21ನೇ ಸಾಲಿನಲ್ಲಿ ರೈತರು ಬೆಳೆದ 25 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಆದರೆ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ದಲ್ಲಾಳಿಗಳು ಖರೀದಿಸದೇ ಕಡಿಮೆ ಬೆಲೆಗೆ ಬೆಳೆಗಳನ್ನು ರೈತರಿಂದ ಖರೀದಿಸುತ್ತಿದ್ದಾರೆ. ಅಂತಹ ಖರೀದಿದಾರರು, ವರ್ತಕರು, ದಲ್ಲಾಳಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅನ್ನದಾತ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು. ರೈತರ ಪರಿಶ್ರಮಕ್ಕೆ ಹೆಚ್ಚಿನ ಬೆಲೆ ಸಿಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರವು ಎಲ್ಲಾ ಮಾರುಕಟ್ಟೆಯಲ್ಲಿ ರೈತರು ಬೆಳೆದಿರುವ ಭತ್ತ, ಮೆಕ್ಕೆಜೋಳ, ಈರುಳ್ಳಿ, ರಾಗಿ, ತೊಗರಿ ಇತರೆ ಬೆಳೆಗಳನ್ನು ಖರೀದಿಸಲು ತಕ್ಷಣ ಖರೀದಿ ಕೇಂದ್ರ ಆರಂಭಿಸುವ ಅಗತ್ಯವಿದೆ. ಖರೀದಿ ಪ್ರಕ್ರಿಯೆ ವಿಳಂಬವಾದರೆ ಹೊರಗಿನ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಬೆಳೆ ಖರೀದಿಸುವ ಸಾಧ್ಯತೆ ಇದೆ. ಒಂದು ವೇಳೆ ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸದಿದ್ದರೆ ತೀವ್ರಸ್ವರೂಪದ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದರು.
ಸಂಘಟನೆಯ ಹೆಚ್.ಆನಂದಪ್ಪ, ಎನ್.ಪಿ.ರವಿರಾಜ, ಕರಿಬಸಪ್ಪ, ಎನ್.ಪಿ.ಧರ್ಮರಾಜ, ಕೆ.ಸಿ.ಬಸಪ್ಪ ಅರಬಘಟ್ಟ, ಹೆಚ್.ನಾಗರಾಜಪ್ಪ ದೊಡ್ಡೇರಹಳ್ಳಿ, ಡಿ.ಎಸ್.ನೀಲಕಂಠಪ್ಪ, ಹೆಚ್.ಬಿ.ಬಸವರಾಜ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.