Tuesday, July 5, 2022

Latest Posts

ದಾವಣಗೆರೆ ಗ್ರಾಮ ಪಂಚಾಯಿತಿ ಚುನಾವಣೆ: ಮಧ್ಯರಾತ್ರಿ ಹೊತ್ತಿಗೆ ಪೂರ್ಣ ಫಲಿತಾಂಶ

ಹೊಸ ದಿಗಂತ ವರದಿ, ದಾವಣಗೆರೆ:

ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕಾರ್ಯ ಬುಧವಾರ ಆರಂಭಗೊಂಡಿದ್ದು, ಮಧ್ಯರಾತ್ರಿ ಹೊತ್ತಿಗೆ ಪೂರ್ಣ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ.
ದಾವಣಗೆರೆ, ಹೊನ್ನಾಳಿ, ಜಗಳೂರು, ಹರಿಹರ, ನ್ಯಾಮತಿ ಮತ್ತು ಚನ್ನಗಿರಿ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಪ್ರಾರಂಭಗೊಂಡಿತು. ಮರು ಎಣಿಕೆಗೆ ಅವಕಾಶವಿಲ್ಲವೆಂದು ಅಪರ ಜಿಲ್ಲಾಧಿಕಾರಿ ಸೂಚಿಸಿದ್ದರ ಮೇರೆಗೆ ಸಿಬ್ಬಂದಿಗಳು ಗಲಿಬಿಲಿ ಮಾಡಿಕೊಳ್ಳದೆ, ನಿಧಾನಗತಿಯಲ್ಲಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.
ನಗರದಲ್ಲಿ ಬೆಳಗ್ಗೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಗಿರೀಶ್ ಸಮ್ಮುಖದಲ್ಲಿ ನಿಯಮಾನುಸಾರ ಸ್ಟ್ರಾಂಗ್ ರೂಮ್ ತೆರೆದು, ಮತ ಎಣಿಕೆಗೆ ಚಾಲನೆ ನೀಡಲಾಯಿತು. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಸಿಬ್ಬಂದಿ, ಅಭ್ಯರ್ಥಿ ಹಾಗೂ ಏಜೆಂಟರನ್ನು ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನ್ ಮಾಡಲಾಯಿತು. ನಂತರ ಮತ ಎಣಿಕೆ ಕೇಂದ್ರಕ್ಕೆ ಸರದಿ ಸಾಲಿನಂತೆ ಮತ ಪೆಟ್ಟಿಗೆಗಳನ್ನು ಕೊಂಡೊಯ್ಯಲಾಯಿತು. ಅಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಅವುಗಳನ್ನು ತೆರೆದು ಎಣಿಕೆ ಪ್ರಾರಂಭಿಸಲಾಯಿತು.
ಹರಿಹರ, ನ್ಯಾಮತಿ ಮತ್ತು ಹೊನ್ನಾಳಿ ತಾಲೂಕುಗಳಲ್ಲಿನ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಗಳು ಸಮಾನ ಮತ ಪಡೆದಿದ್ದರಿಂದ ಸದಸ್ಯರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರಿನಲ್ಲಿ ಟಿ.ವಿ.ಉಷಾ ಮತ್ತು ವೀಣಾ ತಲಾ 119 ಮತಗಳು ಪಡೆದಿದ್ದು, ಲಾಟರಿಯಲ್ಲಿ ಟಿ.ವಿ.ಉಷಾ ಅದೃಷ್ಟ ಒಲಿಸಿಕೊಂಡರು. ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮ ಪಂಚಾಯಿತಿಯ ಕೂಗನಹಳ್ಳಿ ತಾಂಡ-2ರಲ್ಲಿ ಜಯಮ್ಮ, ಹರಿಹರ ತಾಲೂಕಿನ ಹಾಲಿವಾಣ ಗ್ರಾಮ ಪಂಚಾಯಿತಿಯ ಕೊಮಾರನಹಳ್ಳಿ ವಾರ್ಡ್‌ನಲ್ಲಿ ಕಮಲಾಬಾಯಿ, ಹೊಳೆಸಿರಿಗೆರೆಯಲ್ಲಿ ವಿನಾಯಕ ಅವರುಗಳು ಲಾಟರಿ ಮೂಲಕ ಆಯ್ಕೆಯಾದರು.
ದಾವಣಗೆರೆ ತಾಲೂಕು ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಸಾಧಿಕ್‌ವುಲ್ಲಾ ತಮ್ಮ ಪ್ರತಿಸ್ಪರ್ಧಿ ಕಾಡಜ್ಜಿ ತಿಪ್ಪಣ್ಣ ಎದುರು 3 ಮತಗಳ ಅಂತರದಿಂದ ಜಯ ಗಳಿಸಿದರು. ಸಾಧಿಕ್‌ವುಲ್ಲಾ 187 ಮತಗಳನ್ನು ಪಡೆದರೆ, ಕಾಡಜ್ಜಿ ತಿಪ್ಪಣ್ಣ 184 ಮತ ಪಡೆದಿದ್ದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇಬ್ಬರು ಪತ್ರಕರ್ತರು ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ಕೋಡಿಹಳ್ಳಿ ಕ್ಷೇತ್ರದಿಂದ ನವೀನ್ ಮತ್ತು ಆಲೂರು ಗ್ರಾಮ ಪಂಚಾಯಿತಿ ಮಲ್ಲಾಪುರ ಕ್ಷೇತ್ರದಿಂದ ನಾಗರಾಜ್ ಜಯ ಸಾಧಿಸಿದ್ದಾರೆ.
ದಾವಣಗೆರೆ ತಾಲೂಕಿನ ಮತ ಎಣಿಕೆ ಕಾರ್ಯ ಮೋತಿ ವೀರಪ್ಪ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಬೆಳಗ್ಗೆ 9.30ರ ಸಮಯದಲ್ಲಿ ಪ್ರಥಮ ಫಲಿತಾಂಶ ಬಂದಿತು. ಕುರ್ಕಿ ಗ್ರಾಮ ಪಂಚಾಯಿತಿ ಹನುಮನಹಳ್ಳಿ ಕ್ಷೇತ್ರದಲ್ಲಿ ಬಿ.ಓ.ರಾಜು 330 ಮತ ಪಡೆದು ಪ್ರಥಮ ಗೆಲುವು ದಾಖಲಿಸಿದರು. ಇವರ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ 217 ಮತ ಪಡೆದಿದ್ದರು.
ದೊಡ್ಡಬಾತಿ ಗ್ರಾಮ ಪಂಚಾಯಿತಿ ವತಿಯಿಂದ ಕೆ.ಜಿ.ಉಮೇಶ್ ಗೆಲುವು ಸಾಧಿಸಿದರು. ಇವರು ಈ ಹಿಂದೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದರು. ಮಾಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿ.ಕೆ.ಪರಶುರಾಮ ಅವರು 6ನೇ ಬಾರಿ ಗೆಲುವು ಸಾಧಿಸಿದರು. ವಡ್ಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿವೃತ್ತ ಇಂಜಿನಿಯರ್ ಓದೋ ಗಂಗಪ್ಪ ಸಹೋದರರ ಪುತ್ರ ಓದೋ ಮಲ್ಲೇಶ್ ಗೆಲುವು ಸಾಧಿಸಿದರು.
ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಕಲಂ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಪೊಲೀಸ್ ಇಲಾಖೆಯಿಂದ ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ ಸೂಕ್ತ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿತ್ತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ದಾವಣಗೆರೆ ಮತ್ತು ಹರಿಹರದ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ದಾವಣಗೆರೆಯ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.
ಕೋವಿಡ್ ಹಾವಳಿ ನಡುವೆಯೂ ಮತ ಎಣಿಕೆ ಕೇಂದ್ರದ ಸಮೀಪ ಜನಜಂಗುಳಿ ವಿಪರೀತವಾಗಿತ್ತು. ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್, ಡಿವೈಎಸ್ಪಿ ನಾಗೇಶ್ ಐತಾಳ್ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ತಹಶೀಲ್ದಾರ್ ಗಿರೀಶ್ ಮತ ಎಣಿಕೆ ಕೇಂದ್ರದಲ್ಲಿ ಓಡಾಡುತ್ತಾ, ಅನಗತ್ಯವಾಗಿ ನಿಂತಿದ್ದವರನ್ನು ಹೊರಗೆ ಕಳಿಸುವಲ್ಲಿ ನಿರತರಾಗಿದ್ದರು. ಪೊಲೀಸರ ಕಣ್ತಪ್ಪಿಸಿ ಮತ ಎಣಿಕೆ ಕೇಂದ್ರಕ್ಕೆ ಕೆಲವರು ತಂದಿದ್ದ ಮೊಬೈಲ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss