ದಾವಣಗೆರೆ: ಹೆಚ್ಚುತ್ತಿರುವ ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್ಡೌನ್ ಹೇರಿಕೆಯಾಗುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರ್ವಭಾವಿ ಎಂಬಂತೆ ಭಾನುವಾರ ವಿಧಿಸಿದ್ದ ಲಾಕ್ಡೌನ್ಗೆ ಜಿಲ್ಲೆಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ದಿನೇದಿನೇ ಸೋಂಕು ಉಲ್ಬಣವಾಗುತ್ತಿರುವ ಕಾರಣ ಜನರು ಸ್ವಯಂಪ್ರೇರಿತರಾಗಿಯೇ ಭಾನುವಾರದ ಕರ್ಫ್ಯೂಗೆ ಸಹಕರಿಸಿದರು. ದಿನವಿಡೀ ಬಹುತೇಕ ಮಂದಿ ಮನೆಯಲ್ಲೇ ಉಳಿದಿದ್ದರಿಂದ ಜಿಲ್ಲಾಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ರಸ್ತೆ ಬೀದಿಗಳು ಹಾಳು ಹೊಡೆಯುತ್ತಿದ್ದವು. ನಗರದಲ್ಲೆಡೆ ಸ್ಮಶಾನಮೌನ ಆವರಿಸಿತ್ತು. ಮಾರುಕಟ್ಟೆ ಪ್ರದೇಶಗಳಂತೂ ಖಾಲಿ ಮೈದಾನದಂತೆ ಗೋಚರಿಸುತ್ತಿದ್ದವು.
ಭಾನುವಾರ ಬಂತೆಂದರೆ ಸಾಕು ವಾರದ ಸಂತೆಯಲ್ಲಿ ಗಿಜಿಗುಡುತ್ತಿದ್ದ ಗಡಿಯಾರ ಕಂಬ, ಜಗಳೂರು ರಸ್ತೆ, ಮಂಡಿಪೇಟೆ, ಚೌಕಿಪೇಟೆ, ಚಾಮರಾಜಪೇಟೆ, ಬಿನ್ನಿ ಕಂಪನಿ ರಸ್ತೆ, ದೊಡ್ಡಪೇಟೆ, ವಿಜಯಲಕ್ಷ್ಮೀ ರಸ್ತೆ, ಕೆ.ಆರ್. ಮಾರುಕಟ್ಟೆ, ಪಿ.ಬಿ. ರಸ್ತೆ, ಅಶೋಕ ರಸ್ತೆ ಮತ್ತಿತರೆ ಪ್ರದೇಶಗಳು, ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಕೇವಲ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಇದ್ದುದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯಲಿಲ್ಲ. ಕ್ಷೌರದ ಅಂಗಡಿ, ಬಟ್ಟೆ ಅಂಗಡಿ, ಗೊಬ್ಬರದ ಅಂಗಡಿ, ಮೊಬೈಲ್ ಅಂಗಡಿ, ಮದ್ಯದಂಗಡಿ ಸಂಪೂರ್ಣ ಬಂದ್ ಆಗಿದ್ದವು.
ಕೊರೋನಾ ಭೀತಿ ನಡುವೆಯೂ ಮಧ್ಯಾಹ್ನದವರೆಗೆ ಸಣ್ಣಪುಟ್ಟ ಬೀದಿಗಳಲ್ಲಿ ಜನಸಂಚಾರ ಸಾಮಾನ್ಯವಾಗಿತ್ತು. ಅಗತ್ಯ ವಸ್ತು ಖರೀದಿಸಲು ಜನರು ಓಡಾಡುತ್ತಿದ್ದುದು ಕಂಡುಬಂತು. ಹದಡಿ ರಸ್ತೆ, ಪಿ.ಬಿ. ರಸ್ತೆ, ಶಾಬನೂರು ರಸ್ತೆ, ರಿಂಗ್ ರಸ್ತೆ ಸಹಿತ ಅನೇಕ ರಸ್ತೆ, ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ, ನಗರದ ಪ್ರಮುಖ ವೃತ್ತಗಳಲ್ಲಿ ವಾಹನ ಸಂಚಾರ ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿತ್ತು. ಅಲ್ಲೊಂದು ಇಲ್ಲೊಂದು ಸಂಚರಿಸುತ್ತಿದ್ದ ವಾಹನಗಳ ಚಾಲಕರನ್ನು ಪೊಲೀಸರು ತಡೆದು ವಿಚಾರಿಸಿಕೊಳ್ಳುತ್ತಿದ್ದರು.
ಬೆಳಗ್ಗೆ ಎಪಿಎಂಸಿ, ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಪಟ್ಟಿತ್ತು. ಭಾನುವಾರದ ವಿಶೇಷವೆಂಬಂತೆ ಮೀನು, ಕೋಳಿ, ಮಾಂಸದಂಗಡಿಗಳಿಗೂ ಜನ ಮುಗಿಬಿದ್ದಿದ್ದರು. ಇದನ್ನು ಹೊರತುಪಡಿಸಿ ಎಲ್ಲೆಡೆ ಓಡಾಟ ವಿರಳವಾಗಿತ್ತು. ಮೆಡಿಕಲ್ ಶಾಪ್, ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಬೇಕರಿ, ದಿನಸಿ ಅಂಗಡಿ, ಹಾಲಿನ ಕೇಂದ್ರ ಸೇರಿದಂತೆ ಅಗತ್ಯ ವಸ್ತು ಪೂರೈಕೆ ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಹೋಟೆಲ್ಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೂ ಕೆಲ ಹೋಟೆಲ್ಗಳು ಗ್ರಾಹಕರಿಲ್ಲದೆ ಮಧ್ಯಾಹ್ನದ ವೇಳೆಗೆ ಬಂದ್ ಆದವು. ಇನ್ನೂ ಕೆಲ ಅಗತ್ಯ ವಸ್ತು ಪೂರೈಕೆ ಅಂಗಡಿಯವರು ಕೂಡ ವ್ಯಾಪಾರವಿಲ್ಲದೆ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ನಡೆದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಆಟೋ, ಆಪೆ ಆಟೋ, ಬಸ್ಗಳು ರಸ್ತೆಗೆ ಇಳಿಯಲಿಲ್ಲ. ಕೆಎಸ್ಸಾರ್ಟಿೆಸಿ ಬಸ್ಗಳು ಸಂಚಾರ ಸ್ಥಗಿತಗೊಳಿಸಿ ನಿಲ್ದಾಣದಲ್ಲೇ ಮೊಕ್ಕಾಂ ಹೂಡಿದ್ದವು. ಬಸ್ ಸಂಚಾರವಿಲ್ಲದ ಕಾರಣ ನಿಲ್ದಾಣವೂ ಭಣಗುಡುತ್ತಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಸಾಕಷ್ಟಿತ್ತು. ಹೆಚ್ಚುತ್ತಿರುವ ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ಡೌನ್ ಹೇರಿಕೆಯಾಗುವ ಸುದ್ದಿಗಳ ಹಿನ್ನೆಲೆಯಲ್ಲಿ ಜನರು ತಂತಮ್ಮ ಸ್ಥಳಗಳಿಗೆ ಸೇರಿಕೊಳ್ಳುವ ಧಾವಂತದಲ್ಲಿದ್ದಂತೆ ಕಂಡುಬಂತು.
ಈಗಾಗಲೇ ಜಿಲ್ಲೆಯ ಗ್ರಾಮೀಣ ಭಾಗಗಳಿಗೂ ಕೊರೋನಾ ಕಾಲಿಟ್ಟಿರುವ ಕಾರಣ ಕೆಲ ಗ್ರಾಮಗಳಲ್ಲಿ ಸ್ವಯಂಪ್ರೇರಿತ ಸೀಲ್ಡೌನ್ ಮಾಡಿಕೊಳ್ಳಲಾಗಿತ್ತು. ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಗುಂಡಿ ತೋಡಿ, ಮುಳ್ಳಿನ ಬೇಲಿ ಹಾಕಿ ಹೊರಗಿನವರು ಹಳ್ಳಿಗಳತ್ತ ಬರದಂತೆ ತಡೆಯಲಾಗುತ್ತಿದೆ. ಹೀಗಾಗಿ ಕಳೆದ ವಾರಕ್ಕಿಂತಲೂ ಈ ಭಾನುವಾರ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆಗುಂದಿದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲೆಯ ಹೊನ್ನಾಳಿ, ಹರಿಹರ, ಚನ್ನಗಿರಿ, ಜಗಳೂರು ತಾಲೂಕಿನಲ್ಲಿ ಸಹ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾದ್ಯಂತ ಸಂಡೇ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.