Saturday, July 2, 2022

Latest Posts

ದಾವಣಗೆರೆ| ಡಿಹೆಚ್ಓ ನೇತೃತ್ವದಲ್ಲಿ ದಾಳಿ: ಮಾಹಿತಿ ದಾಖಲಿಸದ ಆಸ್ಪತ್ರೆ, ನರ್ಸಿಂಗ್ ಹೋಮ್ ಸೀಜ್!

ದಾವಣಗೆರೆ: ನಗರದ ಹಲವೆಡೆ ಗುರುವಾರ ಡಿಹೆಚ್ಓ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳ ತಂಡವು, ಐಎಲ್ಐ, ಎಸ್‌ಎಆರ್ಐ ಪ್ರಕರಣಗಳನ್ನು ಸರ್ಕಾರದ ವೆಬ್ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡದ ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್‌ಗಳನ್ನು ಸೀಜ್ ಮಾಡಿದೆ.
ಸರ್ಕಾರದ ಆದೇಶದಂತೆ ಆಸ್ಪತ್ರೆಗಳಿಗೆ ಬರುವವರಲ್ಲಿ ಶೀತ, ಜ್ವರ(ಐಎಲ್ಐ) ಮತ್ತು ತೀವ್ರ ಉಸಿರಾಟದ ತೊಂದರೆ(ಎಸ್‌ಎಆರ್ಐ) ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಯ ವೆಬ್‌ಪೋರ್ಟಲ್‌ಗೆ ಅಪ್‌ಡೇಟ್ ಮಾಡಬೇಕು. ಆದರೂ ನಗರದ ಕೆಲ ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್‌ಗಳು ಕೊರೋನಾ ಲಕ್ಷಣಗಳಾದ ಐಎಲ್ಐ, ಎಸ್‌ಎಆರ್ಐ ಕೇಸ್ಗಳ ಬಗ್ಗೆ ಆರೋಗ್ಯ ಇಲಾಖೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಿರಲಿಲ್ಲ. ಈ ಕುರಿತಂತೆ ಡಿಸಿ ಮಹಾಂತೇಶ ಬೀಳಗಿ ಖಾಸಗಿ ಕ್ಲಿನಿಕ್, ವೈದ್ಯರು ಹಾಗೂ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ, ಸ್ಪಷ್ಟ ನಿರ್ದೇಶನ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಇಲಾಖೆ ಅಧಿಕಾರಿಗಳು ನೇರ ಕಾರ್ಯಾಚರಣೆಗೆ ಇಳಿದಿದ್ದು, ಲೋಪವೆಸಗಿದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಐಎಲ್ಐ, ಎಸ್‌ಎಆರ್ಐ ಕೇಸ್ಗಳ ಬಗ್ಗೆ ನಿತ್ಯವೂ ಮಾಹಿತಿ ನೀಡಲು ವೆಬ್‌ಸೈಟ್ ರೂಪಿಸಿ ಯೂಸರ್ ನೇಮ್, ಪಾಸ್‌ವರ್ಡ್ ನೀಡಲಾಗಿತ್ತು. ಆದರೆ ಕೆಲವೇ ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳ ವೈದ್ಯರು ಮಾತ್ರ ಮಾಹಿತಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದ ಪಿ.ಜೆ. ಬಡಾವಣೆ, ಕೆ.ಬಿ.ಬಡಾವಣೆ, ಬೇತೂರು ರಸ್ತೆಯಲ್ಲಿರುವ ಒಟ್ಟು 11 ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್‌ಗಳಿಗೆ ಡಿಹೆಚ್ಓ ಡಾ.ರಾಘವೇಂದ್ರಸ್ವಾಮಿ ಮತ್ತವರ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಾಹಿತಿ ಅಪ್‌ಡೇಟ್ ಮಾಡದಿರುವ ಆಸ್ಪತ್ರೆ, ನಸಿಂಗ್ ಹೋಮ್‌ಗಳನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಸೀಜ್ ಮಾಡಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳ ತಂಡದೊಂದಿಗೆ ಕೆಲ ಆಸ್ಪತ್ರೆ, ಕ್ಲಿನಿಕ್ಗಳ ವೈದ್ಯರು ಮಾತಿನ ಚಕಮಕಿ ನಡೆಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಹೆಚ್ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲೆಯಲ್ಲಿ ಐಎಲ್ಐ, ಎಸ್‌ಎಆರ್ಐ ಪ್ರಕರಣ ಅಪ್‌ಡೇಟ್ ಮಾಡದ 170 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೆಪಿಎಂಇ ಅಡಿಯಲ್ಲಿ ನವೀಕರಿಸದ ಮತ್ತು ಐಎಲ್ಐ ಎಸ್‌ಎಆರ್ಐ ಪ್ರಕರಣ ವೆಬ್‌ಪೋರ್ಟಲ್‌ಲ್ಲಿ ದಾಖಲಿಸದೇ ಇರುವ ಒಟ್ಟು 280 ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ನವೀಕರಿಸುವಲ್ಲಿನ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ಜು.3ರಂದು ಡಿಹೆಚ್ಓ ಕಚೇರಿಯಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಖಾಸಗಿ ಆಸ್ಪತ್ರೆಯವರು ಹಾಜರಾಗಿ ಇದರ ಸದುಪಯೋಗ ಪಡೆಯಬೇಕು. ಇನ್ನು 15 ದಿನಗಳ ಒಳಗೆ ನೋಂದಣಿ ನವೀಕರಿಸಿಕೊಂಡು ಸರ್ಕಾರದ ಆದೇಶದಂತೆ ಕಾರ್ಯ ನಿರ್ವಹಿಸಬೇಕು ಎಂದು ಅವರು ನುಡಿದರು.
ಡಿಹೆಚ್ಓ ತಂಡದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಬಿಇಹೆಚ್ಓ ಡಾ.ಸುರೇಶ್ ಸೇರಿದಂತೆ ಇತರೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss