Sunday, August 14, 2022

Latest Posts

ದಾವಣಗೆರೆ| ದೇವಸ್ಥಾನದ ಆಸ್ತಿ ಹಕ್ಕಿಗೆ ನಡೀತು ಹೈಡ್ರಾಮಾ: ಅರ್ಚಕರ ಕುಟುಂಬ ಪೊಲೀಸ್ ವಶಕ್ಕೆ

ಹೊಸ ದಿಗಂತ ವರದಿ, ದಾವಣಗೆರೆ:

ದಾವಣಗೆರೆ ನಗರದ ಹೃದಯಭಾಗದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆಸ್ತಿ ವಿವಾದ ತಾರಕಕ್ಕೇರಿದ್ದು, ಶನಿವಾರ ಪೂಜೆಗೆ ಅಡ್ಡಿಪಡಿಸಿದ ಹಳೆಯ ಪೂಜಾರಿ ಕುಟುಂಬವನ್ನು ಪೊಲೀಸರು ವಶಕ್ಕೆ ಪಡೆದರು.
ದೇವಸ್ಥಾನಕ್ಕೆ ಹೊಸ ಪೂಜಾರಿ ನೇಮಕಕ್ಕೆ ಹಳೆಯ ಪೂಜಾರಿ ಮತ್ತವರ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ದೇವಸ್ಥಾನದ ಅಭಿವೃದ್ಧಿ ಸಮಿತಿ ಹಾಗೂ ಪೂಜಾರಿ ಕುಟುಂಬದವರ ಮಧ್ಯೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ, ಹಳೆಯ ಪೂಜಾರಿ ಲಿಂಗರಾಜ್ ಮತ್ತವರ ಕುಟುಂಬದವರನ್ನು ವಶಕ್ಕೆ ಪಡೆದರು. ಬಳಿಕ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ಕಲ್ಪಿಸಲಾಯಿತು.
ದೇವಸ್ಥಾನದ ಆಸ್ತಿಗೆ ಸಂಬಂಧಿಸಿದಂತೆ ದೇಗುಲದ ಆಡಳಿತ ಮಂಡಳಿ ಹಾಗೂ ಪೂಜೆ ನಡೆಸುತ್ತಿದ್ದ ಅರ್ಚಕ ಲಿಂಗರಾಜ್ ಕುಟುಂಬದ ನಡುವೆ ವ್ಯಾಜ್ಯವಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬೀಗ ಹಾಕುವಂತೆ ಕಳೆದ 6 ತಿಂಗಳ ಹಿಂದೆ ಆದೇಶಿಸಿತ್ತು. ಈ ವಿಚಾರವಾಗಿ ಪೂಜಾರಿ ಲಿಂಗರಾಜ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ. ಆದರೆ ಇಂದು ಬೇರೆ ಪೂಜಾರಿಯನ್ನು ಕರೆತಂದು ಪೂಜೆ ಆರಂಭಿಸಲು ಜಿಲ್ಲಾಡಳಿತ ಮುಂದಾಗುತ್ತಿದ್ದಂತೆ, ಹಳೆಯ ಪೂಜಾರಿ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಪೂಜೆ ಆರಂಭಿಸುವಂತೆ ದೇವಸ್ಥಾನ ಸಮಿತಿಯವರು ಪಟ್ಟು ಹಿಡಿದರೆ, ಬೇರೆ ಅರ್ಚಕರಿಂದ ಪೂಜೆ ಮಾಡಿಸಲು ಹಳೆಯ ಪೂಜಾರಿ ಕುಟುಂಬದವರು ತಡೆ ಒಡ್ಡಿದರು. ಉಭಯ ಗುಂಪಿನವರೂ ದೇವಸ್ಥಾನದ ಮುಂದೆ ಧರಣಿ ನಡೆಸಿದರು. ಅಧಿಕಾರಿಗಳ ಮಧ್ಯ ಪ್ರವೇಶದಿಂದ ಸದ್ಯ ಪರಿಸ್ಥಿತಿ ತಣ್ಣಗಾಗಿದ್ದು, ದೇಗುಲದ ಬಾಗಿಲು ತೆರೆಸಿ ಹೊಸ ಅರ್ಚಕರಿಂದ ಪೂಜೆಗೆ ಅನುವು ಮಾಡಿಕೊಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss