ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಯುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಬೆಂಗಳೂರಿನ ಎಂ.ಎ.ಹೆಗಡೆ ಅಭಿಪ್ರಾಯಪಟ್ಟರು.
ನಗರದ ಸಿದ್ದಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಕಲಾಕುಂಚ ಸಂಸ್ಥೆಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಕನ್ನಡ ಕುವರ-ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಅನ್ನ, ಗಾಳಿ, ನೀರು ಸೇವಿಸಿ ನೌಕರಿ ಕಾರಣಕ್ಕೆ ಆಂಗ್ಲ ಮಾಧ್ಯಮವನ್ನು ಅಪ್ಪಿಕೊಳ್ಳುವುದು ಸರಿಯಲ್ಲ. ಇಂಗ್ಲೀಷ್ ಭಾಷೆ ಕಲಿಯುವುದು ಅನಿವಾರ್ಯವಾದರೂ, ಅದನ್ನು ಸಂವಹನ ಮಾಧ್ಯಮವಾಗಿ ಬಳಸುವ ಅಗತ್ಯವಿಲ್ಲ ಎಂದರು.
ಭಾಷೆ ಎಂಬುದು ಕೇವಲ ಮಾತನಾಡುವ ಮಾಧ್ಯಮವಷ್ಟೇ ಅಲ್ಲದೆ, ಅದು ಸಂಸ್ಕೃತಿಯ ಸಂಕೇತವಾಗಿರುತ್ತದೆ. ಆದ್ದರಿಂದ ನಮ್ಮ ಮಾತೃ ಭಾಷೆಯನ್ನು ಬಿಟ್ಟು ಮತ್ತೊಂದು ಭಾಷೆ ಕಲಿಯುವುದು ಸಂಸ್ಕೃತಿಯ ಅಂಶವೊAದನ್ನು ಕಳೆದುಕೊಂಡಂತೆ. ಭಾಷೆಗಳಿಗೂ ತಮ್ಮದೇ ಆದ ಇತಿಹಾಸವಿದೆ. ಆದರೆ ಪೋಷಕರು ಶಿಕ್ಷಣದ ಗುಣಮಟ್ಟ ನೋಡದೆ, ಆಂಗ್ಲ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುವುದು ತಪ್ಪು ಎಂದು ಅವರು ಸಲಹೆ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ, ನಾವೆಲ್ಲರೂ ಸೇರಿ ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರನ್ನು ಉಳಿಸಬೇಕಿದೆ. ಅನ್ನದ ಭಾಷೆಯನ್ನಾಗಿ ಮಾಡಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ಸರ್ಕಾರ ಸೇರಿದಂತೆ ಸಂಘ-ಸoಸ್ಥೆಗಳು, ವಿದ್ಯಾರ್ಥಿಗಳು, ಶಿಕ್ಷಕರು ಈ ದಿಸೆಯಲ್ಲಿ ಕನ್ನಡ ಉಳಿಸುವ ಪ್ರಯತ್ನ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಪ್ರಥಮ ಭಾಷೆಯಲ್ಲಿ 125ಕ್ಕೆ 120ರಿಂದ 124 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಕುವರ-ಕುವರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಡಾ.ಎಂ.ಜಿ.ಈಶ್ವರಪ್ಪ ಅವರನ್ನು ಅಭಿನಂದಿಸಲಾಯಿತು.
ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಹಿರಿಯ ಪತ್ರಕರ್ತ ಹಳೇಬೀಡು ರಾಮಪ್ರಸಾದ್, ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಾಲಿಗ್ರಾಮ ಗಣೇಶ ಶೆಣೈ, ಕಲಾಕುಂಚ ಅಧ್ಯಕ್ಷ ಕೆ.ಹೆಚ್.ಮಂಜುನಾಥ, ಬೆಳ್ಳೂರು ಸಂತೋಷಕುಮಾರ ಶೆಟ್ಟಿ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.