ದಾವಣಗೆರೆ: ಹೈಕಮಾಂಡ್ ತೀರ್ಮಾನದಂತೆ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಮರ್ಥಿಸಿಕೊಂಡರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ನಾಯಕರ ವಿಶ್ವಾಸಕ್ಕೆ ತೆಗೆದುಕೊಂಡೇ ಬಿಜೆಪಿ ಹೈಕಮಾಂಡ್ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆ. ಹೈಕಮಾಂಡ್ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲರೂ ಬದ್ಧರಿದ್ದೇವೆ. ಯಾರನ್ನೂ ಕಡೆಗಣಿಸಿಲ್ಲ, ಬಿಜೆಪಿಯಲ್ಲಿ ಯಾವ ಬಂಡಾಯ, ಅಸಮಾಧಾನವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಎಲ್ಲರಿಗೂ ಸ್ಥಾನಮಾನ ಪಡೆಯುವ ಆಸೆ ಇರುವುದು ಸಹಜ. ಆದರೆ ವ್ಯಕ್ತಿಗಿಂತ ಪಕ್ಷ ದೊಡ್ಡದು. ರಮೇಶ್ ಕತ್ತಿ, ಪ್ರಕಾಶ್ ಶೆಟ್ಟಿ ಹಾಗೂ ಪ್ರಭಾಕರ್ ಕೋರೆಯವರು ಟಿಕೆಟ್ ಕೇಳಿದ್ದರು. ಕೋರೆಯವರ ಜೊತೆ ಫೋನ್ನಲ್ಲಿ ಮಾತನಾಡಿದ್ದೇನೆ. ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ ಇಲ್ಲವೆಂದು ಅವರೇ ಹೇಳಿದ್ದಾರೆ ಎಂದರಲ್ಲದೆ, ಕೊರೋನಾ ನಿಯಂತ್ರಣ ಕುರಿತಂತೆ ದಾವಣಗೆರೆ ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಭೈರತಿ ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.