Friday, August 12, 2022

Latest Posts

ದಾವಣಗೆರೆ| ಮಂಗಳವಾರ ಒಂದೇ ದಿನ ಬರೋಬ್ಬರಿ 22 ಹೊಸ ಕೊರೋನಾ ಪಾಸಿಟಿವ್ ಕೇಸ್

ದಾವಣಗೆರೆ:  ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 22 ಹೊಸ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಜೊತೆಗೆ 6 ಮಂದಿ ಸೋಂಕಿತರು ಸಹ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೆ ಸಿದ್ಧರಾಗಿದ್ದಾರೆ. ಮಂಗಳವಾರದ ವರದಿಗಳಲ್ಲಿ 732 ನೆಗೆಟಿವ್, 22 ಪಾಸಿಟಿವ್ ಬಂದಿವೆ. ಹೊಸದಾಗಿ ಪತ್ತೆಯಾಗಿರುವ ಕೇಸ್‌ಗಳಲ್ಲಿ ಕೆಲವನ್ನು ಹೊರತುಪಡಿಸಿದರೆ ಇನ್ನುಳಿದವರೆಲ್ಲ ಹಳೇ ರೋಗಿಗಳ ಸಂಪರ್ಕಿತರಾಗಿದ್ದಾರೆ. ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಲ್ಲಿ ಒಟ್ಟು 10 ಮಹಿಳೆಯರು, 12 ಮಂದಿ ಪುರುಷರು ಇದ್ದಾರೆ. ಈ ಪೈಕಿ ಪಿ.662 ರೋಗಿಯ ಸಂಪರ್ಕದಿಂದ 6, ಪಿ.976 ಸಂಖ್ಯೆ ರೋಗಿಯಿಂದ 4,
ಪಿ.663 ಸಂಖ್ಯೆ ರೋಗಿಯಿಂದ 3 ಹಾಗೂ ಪಿ.694 ಮತ್ತು ಪಿ.556 ಸಂಖ್ಯೆ ರೋಗಿಯಿಂದ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಗುಜರಾತ್ ಅಹಮದಾಬಾದ್ ಟ್ರಾವೆಲ್ ಹಿಸ್ಟರಿ ಇರುವ ಇಬ್ಬರು ಮತ್ತು ಕೇರಳದಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಕಂಟೈನ್ ಮೆಂಟ್ ಝೋನ್ ಸಂಪರ್ಕದಿಂದ 48 ವರ್ಷದ ಪುರುಷ ಪೊಲೀಸ್ ಪೇದೆಗೂ ಸೋಂಕು ಹರಡಿದೆ. ಅಂತರ್ ಜಿಲ್ಲಾ ಪ್ರವಾಸ ಮಾಡಿದ್ದ ಪಿ.1365, ಪಿ.1366 ಸಂಖ್ಯೆಯ ರೋಗಿಗಳಿಗೂ ಸೋಂಕು ತಗುಲಿದೆ. ಮಧ್ಯಾಹ್ನದ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ಸೇರ್ಪಡೆಯಾಗಿದ್ದ ಈ ಎರಡೂ ಪ್ರಕರಣಗಳು ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ್ದಾಗಿವೆ. ಈವರೆಗೆ ಜಿಲ್ಲಾ ಕೇಂದ್ರದಲ್ಲಿ ಒಟ್ಟು 112 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಇಬ್ಬರು ಗುಣಮುಖರಾಗಿದ್ದರೆ ನಾಲ್ವರು ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 106 ಸಕ್ರಿಯ ಪ್ರಕರಣಗಳಿವೆ. ಈಗಾಗಲೇ ಸೀಲ್‌ಡೌನ್ ಆಗಿರುವ ಇಮಾಮ್ ನಗರ ಸಮೀಪದ ಆನೆಕೊಂಡ ಮತ್ತು ವಿನಾಯಕ ನಗರ ಸೇರಿ ನಗರದಲ್ಲಿ ಒಟ್ಟು 11 ಕಂಟೈನ್‌ಮೆಂಟ್ ಝೋನ್ ಆಗಿವೆ. ಇದೆಲ್ಲದರ ನಡುವೆ ಖುಷಿಯ ವಿಚಾರ ಎಂಬಂತೆ ರೋಗಿ ಸಂಖ್ಯೆ 585, 616 ಮತ್ತು 635 ಸಂಪೂರ್ಣ ಗುಣಮುಖರಾಗಿದ್ದಾರೆ. ಶಿಷ್ಟಾಚಾರದಂತೆ ಎಲ್ಲ ಪರೀಕ್ಷೆ ನಡೆಸಲಾಗಿದ್ದು, ಇವರನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಅಲ್ಲದೆ, ಇನ್ನೂ ಮೂರು ಜನರು ಬಿಡುಗಡೆಗೆ ಸಿದ್ಧರಾಗಿದ್ದಾರೆ. ಹೃದಯ ರೋಗದಿಂದ ಬಳಲುತ್ತಿದ್ದ 18 ವರ್ಷದ ಯುವತಿ(ಪಿ.581) ಕೋವಿಡ್ ಪರೀಕ್ಷೆಯ ಎರಡು ಸುತ್ತುಗಳಲ್ಲೂ ನೆಗೆಟಿವ್ ವರದಿ
ಬಂದಿದ್ದರೂ, ಹೃದ್ರೋಗದ ಕಾರಣಕ್ಕಾಗಿ ಚಿಕಿತ್ಸೆ ಮುಂದುವರೆಸಲಾಗಿದೆ. ಯುವತಿಯನ್ನು ನಗರದ ಬಾಪೂಜಿ ಅಥವಾ ಎಸ್.ಎಸ್. ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರೆಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಡಿಸಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss