ದಾವಣಗೆರೆ: ಹೊಸ ಬಟ್ಟೆ ಖರೀದಿಸಲು ಬಂದಿದ್ದ ಮುಸ್ಲಿಂ ಮಹಿಳೆಯರನ್ನು ಯುವಕರ ಗುಂಪೊಂದು ಬೆದರಿಸಿ ಮನೆಗೆ ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸೈಯದ್ ಮಹಮದ್(24), ಫಯಾಜ್ ಅಹಮದ್(32) ಬಂಧಿತ ಆರೋಪಿಗಳು. ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಬಿ.ಎಸ್.ಚನ್ನಬಸಪ್ಪ & ಸನ್ಸ್ ಬಟ್ಟೆ ಅಂಗಡಿಯಲ್ಲಿ ರಂಜಾನ್ ಪ್ರಯುಕ್ತ ಹೊಸ ಬಟ್ಟೆ ಖರೀದಿಸಿದ್ದ ಮಹಿಳೆಯರನ್ನು ತಡೆದ ಯುವಕರ ಗುಂಪೊಂದು, ಬಟ್ಟೆ ಕಿತ್ತುಕೊಂಡು ತಮ್ಮ ಸಮುದಾಯವನ್ನು ದ್ವೇಷಿಸುವ ಇಂತಹವರ ಅಂಗಡಿಗಳಲ್ಲಿ ವ್ಯವಹರಿಸದಂತೆ ಬುದ್ಧಿ ಹೇಳಿ ಕಳಿಸಿತ್ತು. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಗರದ ಗಡಿಯಾರ ಕಂಬ ಸಮೀಪದ ಬಟ್ಟೆ ಅಂಗಡಿ ಬಳಿಯೂ ಇತ್ತೀಚೆಗೆ ನಡೆದಿದ್ದ ಇಂತಹದ್ದೇ ಘಟನೆಯ ವೀಡಿಯೊ ಕೂಡ ವೈರಲ್ ಆಗಿತ್ತು. ಕೊರೋನಾ ಹಾವಳಿ ನಡುವೆ ಸಮಾಜದಲ್ಲಿ ಕೋಮು ಸಾಮರಸ್ಯ ಕದಡುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದ ಪಾಲಿಕೆ ಮೇಯರ್ ಹಾಗೂ ಮುಸ್ಲಿಂ ಸಮಾಜದ ಮುಖಂಡರು, ಸರಳ ರೀತಿಯಲ್ಲಿ ರಂಜಾನ್ ಆಚರಿಸಲು ನಿರ್ಧರಿಸಿರುವುದರಿಂದ ಹೊಸ ಬಟ್ಟೆ ಖರೀದಿಸದಿರಲು ತೀರ್ಮಾನಿಸಲಾಗಿದೆಯೇ ಹೊರತು ಯಾವುದೇ ಜಾತಿ, ಧರ್ಮದವರ ಅಂಗಡಿಗಳಲ್ಲಿ ವ್ಯವಹರಿಸದಂತೆ ತಡೆಯುವ ಕೆಲಸವಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಇದೀಗ ಮತ್ತೊಂದು ಅಂತಹ ಘಟನೆಯೇ ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಆರೋಪಿಗಳ ವಿರುದ್ಧ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.