ದಾವಣಗೆರೆ: ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕನ್ನಡ ವಿರೋಧಿ ಧೋರಣೆ ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ನಿಟುವಳ್ಳಿ ಕಾಲೇಜು ರಸ್ತೆಯಲ್ಲಿರುವ ಎಸ್ಬಿಐ ಶಾಖೆ ಎದುರು ಪ್ರತಿಭಟಿಸಿದ ಸಂಘಟನೆ ಮುಖಂಡರು, ಕಾರ್ಯಕರ್ತರು ಬ್ಯಾಂಕ್ ವ್ಯವಹಾರದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಆಗ್ರಹಿಸಿ ವ್ಯವಸ್ಥಾಪಕರ ಮೂಲಕ ಮನವಿಪತ್ರ ಸಲ್ಲಿಸಿದರು.
ಇದೇ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಎನ್.ವೆಂಕಟೇಶ ಮಾತನಾಡಿ, ಬ್ಯಾಂಕ್ ಪಾಸ್ ಬುಕ್, ಚಲನ್, ಚೆಕ್ ಬುಕ್ ಹೀಗೆ ಪ್ರತಿಯೊಂದರಲ್ಲೂ ಸ್ಥಳೀಯ ಕನ್ನಡ ಭಾಷೆ ಕಡೆಗಣಿಸಿ, ಇಂಗ್ಲೀಷ್, ಹಿಂದಿ ಹೇರುತ್ತಿರುವುದು ಖಂಡನೀಯ. ಕರ್ನಾಟಕದಲ್ಲಿ ಕನ್ನಡವೇ ರಾಜ್ಯ ಮತ್ತು ಆಡಳಿತ ಭಾಷೆಯಾಗಿದ್ದು, ಇಲ್ಲಿ ವ್ಯವಹಾರ, ಉದ್ಯೋಗ, ಉದ್ಯಮ, ಶಿಕ್ಷಣ ಸೇರಿದಂತೆ ಎಲ್ಲಾ ರಂಗಗಳಲ್ಲೂ ಕನ್ನಡವೇ ಪ್ರಧಾನವಾಗಿರಬೇಕು ಎಂಬುದಾಗಿ ಸರ್ಕಾರ ದಶಕಗಳ ಹಿಂದೆಯೇ ಆದೇಶಿಸಿದೆ. ಆದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇದು ಜಾರಿಯಾಗದಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜನರ ಮಾತೃಭಾಷೆ, ವ್ಯವಹಾರ ಭಾಷೆಯೂ ಕನ್ನಡವೇ ಆಗಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿ ಕೂಡ ಜನರ ಸ್ಥಳೀಯ ಭಾಷೆಯಲ್ಲಿ ವ್ಯವಹಾರ ನಡೆಸಲಾಗುತ್ತಿತ್ತು. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ತನ್ನೆಲ್ಲಾ ವ್ಯವಹಾರಗಳಲ್ಲಿ ಹಿಂದಿ, ಇಂಗ್ಲೀಷ್ ಬಳಸುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಬ್ಯಾಂಕ್ನ ಬಹಳಷ್ಟು ಸಿಬ್ಬಂದಿಗಳಿಗೆ ಕನ್ನಡ ಬರುವುದಿಲ್ಲ. ಕೆಲವೊಂದು ಸಲ ಉಡಾಫೆಯಾಗಿ ಮಾತನಾಡಿ ಗ್ರಾಹಕರನ್ನು ಅವಮಾನಿಸುವ ಕೆಲಸ ಮಾಡುತ್ತಾರೆ ಎಂದು ಅವರು ದೂರಿದರು.
ತ್ರಿಭಾಷಾ ಸೂತ್ರದ ಅನ್ವಯ ಸ್ಥಳಿಯ ಭಾಷೆಗೆ ಮೊದಲ ಸ್ಥಾನಮಾನ ನೀಡಬೇಕು. ಇನ್ನು 15 ದಿನಗಳೊಳಗಾಗಿ ಪಾಸ್ ಬುಕ್, ಚಲನ್, ಚೆಕ್ ಬುಕ್ಗಳಲ್ಲಿ ಪ್ರಥಮ ಭಾಷೆಯಾಗಿ
ಕನ್ನಡವನ್ನು ಮುದ್ರಿಸಿ ವ್ಯವಹರಿಸಬೇಕು. ಇಲ್ಲವಾದರೆ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸಂಘಟನೆ ಮುಖಂಡರಾದ ಶೇರ್ ಅಲಿ, ಹುಂಡೇಕರ್, ಮಂಜುನಾಥ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.