Friday, July 1, 2022

Latest Posts

ದಾವಣಗೆರೆ| ಶಿಷ್ಯವೇತನದ ಹೋರಾಟ ಮುಗಿದಿಲ್ಲ; ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ: ಜೆಜೆಎಂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಸ್ಪಷ್ಟನೆ

ದಾವಣಗೆರೆ: ಶಿಷ್ಯವೇತನ ನೀಡುವ ವಿಚಾರವಾಗಿ ಸೋಮವಾರದೊಳಗೆ ಸರ್ಕಾರದಿಂದ ಲಿಖಿತ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮುಷ್ಕರವನ್ನು ಹಿಂಪಡೆದಿದ್ದೇವೆ. ಇಲ್ಲವಾದಲ್ಲಿ ಅನಿವಾರ್ಯವಾಗಿ ಮತ್ತೆ ರಸ್ತೆಗಳಿದು ಹೋರಾಟ ಮುಂದುವರೆಸಬೇಕಾಗುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಮತ್ತು ಗೃಹ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ವೈದ್ಯ ವಿದ್ಯಾರ್ಥಿ ಡಾ.ಹರೀಶ್ ಮಾತನಾಡಿ, ನಾವು ಎರಡು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಅನಿರ್ದಿಷ್ಟ ಮುಷ್ಕರ ಪ್ರಾರಂಭಿಸಿದ್ದೆವು. ಅದರಲ್ಲಿ ನಮ್ಮ 16 ತಿಂಗಳ ಬಾಕಿ ಶಿಷ್ಯವೇತನವನ್ನು ಸರ್ಕಾರ ಭರಿಸುತ್ತದೆ ಎಂಬುದಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ. ಅದರಂತೆ, ಜೂನ್ 2020ರವರೆಗೆ ಶಿಷ್ಯವೇತನ ಬರುತ್ತದೆ. ಅದಾದ ನಂತರ ಮುಂದಿನ ದಿನಗಳಲ್ಲಿನ ಶಿಷ್ಯವೇತನ ಯಾರು ಭರಿಸಬೇಕು ಎಂಬ ಬಗ್ಗೆ ಸರ್ಕಾರದಿಂದ ಲಿಖಿತ ಆದೇಶ ಬರಬೇಕಿದೆ ಎಂದರು.
ಡಾ.ಹಿತಾ ಮಾತನಾಡಿ, ಸರ್ಕಾರಿ ಕೋಟಾದಡಿಯಲ್ಲಿ ಆಯ್ಕೆಗೊಂಡ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳಿಗೆ ಸರ್ಕಾರ ಶಿಷ್ಯವೇತನ ಭರಿಸುತ್ತಿತ್ತು. 2016ರಲ್ಲಿ ಅಡಿಟ್‌ನಲ್ಲಿ ಉಂಟಾದ ತೊಂದರೆಯಿಂದಾಗಿ ಸರ್ಕಾರ ಶಿಷ್ಯವೇತನ ಸ್ಥಗಿತಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ 2018ರಲ್ಲಿ ಈ ವಿಚಾರವಾಗಿ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ ನಂತರ ಶಿಷ್ಯವೇತನ ನೀಡಲಾಯಿತು. ಈಗ ಮತ್ತೆ ಮುಷ್ಕರ ನಡೆಸಿದ್ದರಿಂದ ಸರ್ಕಾರ ಶಿಷ್ಯವೇತನ ಕೊಡಲು ಒಪ್ಪಿದೆ. ಮುಂದೆಯೂ ಪ್ರತಿಬಾರಿ ಶಿಷ್ಯವೇತನ ಪಡೆಯಲು ನಾವು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದಯೇ? ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಡಿಕೆಗಳಿಗೆ ಸಂಬಂಧಿಸಿದಂತೆ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಭಾನುವಾರದವರೆಗೆ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ. ಆದರೆ ಮುಷ್ಕರ ಇನ್ನೂ ಅಂತ್ಯವಾಗಿಲ್ಲ. ಆಡಳಿತ ಮಂಡಳಿಯಿಂದ ಪಡೆದು ಸರ್ಕಾರವೇ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಹಾಕಬೇಕು. ಜುಲೈ ತಿಂಗಳಿನಿಂದ ಮುಂದಿನ ಒಂದು ವರ್ಷದ ಶಿಷ್ಯವೇತನ ಯಾರು ನೀಡುತ್ತಾರೆ ಎಂಬ ಕುರಿತು ಸರ್ಕಾರ ಲಿಖಿತವಾಗಿ ಸ್ಪಷ್ಟಪಡಿಸಬೇಕು. ನಮ್ಮ ವಿದ್ಯಾಭ್ಯಾಸ ಮುಗಿಯುವವರೆಗೂ ಶಿಷ್ಯವೇತನ ಕೊಡಬೇಕು. ಆಡಳಿತ ಮಂಡಳಿ ಕೊಡುವುದಾದರೆ ಅದು ಸರ್ಕಾರದ ಮೂಲಕವೇ ನಮಗೆ ಬರಬೇಕು. ಇಲ್ಲದಿದ್ದರೆ ಸೋಮವಾರದಿಂದ ಮತ್ತೆ ಅನಿವಾರ್ಯವಾಗಿ ರಸ್ತೆಗಿಳಿಯಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.
ಜೆಜೆಎಂ ಮೆಡಿಕಲ್ ಕಾಲೇಜಿನ ಡಾ.ನಿಧಿ, ಡಾ.ಸುಧಾಕರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss