Sunday, August 14, 2022

Latest Posts

ದಾವಣಗೆರೆ| ಸಂಭ್ರಮಾಚರಣೆ ನಡೆಸಿಯೇ ಸಿದ್ಧ: ನಿಷೇಧಾಜ್ಞೆ ಹೇರಿದ ಜಿಲ್ಲಾಡಳಿತಕ್ಕೆ ರಾಮಭಕ್ತರ ಸವಾಲ್

ದಾವಣಗೆರೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಭೂಮಿಪೂಜೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಈ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತವು ನಿಷೇಧಾಜ್ಞೆ ಜಾರಿಗೊಳಿಸಿರುವುದು ಸಂಭ್ರಮಾಚರಣೆಗೆ ಕರಿನೆರಳು ಕವಿದಂತಾಗಿದೆ.
ಆ.5ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು ಈಗಾಗಲೇ ನಾಡಿನ ಹಲವು ಮಠಾಧೀಶರು ಆಹ್ವಾನದ ಮೇರೆಗೆ ಅಯೋಧ್ಯೆಗೆ ತೆರಳಿದ್ದಾರೆ. ತಮ್ಮೊಂದಿಗೆ ಪುಣ್ಯಕ್ಷೇತ್ರಗಳ ಮೃತ್ತಿಕೆ, ಪವಿತ್ರ ಜಲವನ್ನೂ ಕೊಂಡೊಯ್ದಿದ್ದಾರೆ. ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಅಯೋಧ್ಯೆಗೆ ತೆರಳಲಾಗದ ಶ್ರೀರಾಮ ಭಕ್ತರು, ಹಿಂದೂಪರ ಸಂಘಟನೆಗಳು ಸ್ಥಳೀಯವಾಗಿ ಕಾರ್ಯಕ್ರಮ ಆಯೋಜಿಸಲು ಯೋಜಿಸಿದ್ದವು. ಆದರೆ ಜಿಲ್ಲಾದ್ಯಂತ ಕಲಂ 144 ಸಿಆರ್‌ಪಿಸಿ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಆದೇಶ ಹೊರಡಿಸಿದ್ದು, ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ.
ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ದಾವಣಗೆರೆ ಪಾತ್ರವೂ ಹಿರಿದಾಗಿದೆ. ಇಲ್ಲಿಂದ ಅನೇಕರು ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡಿದ್ದರು. 1990ರಲ್ಲಿ ನಗರಕ್ಕೆ ರಾಮಜ್ಯೋತಿ ರಥಯಾತ್ರೆ ಬಂದ ಸಂದರ್ಭದಲ್ಲಿ 8 ಜನ ಹಿಂದೂಗಳು ಹುತಾತ್ಮರಾಗಿದ್ದರು. ಪೊಲೀಸ್ ಗೋಲಿಬಾರ್‌ನಲ್ಲಿ 32 ಮಂದಿಗೆ ಗುಂಡೇಟು ತಗುಲಿದರೆ, 40 ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದಾವಣಗೆರೆಯ ರಾಮಭಕ್ತರು ಹಾಗೂ ಹಿಂದೂಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ, ಸಿಹಿ ವಿತರಣೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಮನೆ-ಮನೆಗಳಲ್ಲಿ ವಿಶ್ವ ಹಿಂದೂ ಪರಿಷತ್ ಕರೆಯ ಮೇರೆಗೆ ದೀಪ ಪ್ರಜ್ವಲನ ಮಾಡಲಾಗುತ್ತಿದೆ. ಆದರೆ ಜಿಲ್ಲಾಡಳಿತದ ನಿಷೇಧಾಜ್ಞೆಯು ರಾಮಭಕ್ತರ ಸಂಭ್ರಮಾಚರಣೆಯನ್ನು ಡೋಲಾಯಮಾನವಾಗಿಸಿದೆ.
ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು, ದೇವರ ಫೋಟೊ, ಭಾವಚಿತ್ರಗಳನ್ನಿಟ್ಟು ಯಾವುದೇ ಧಾರ್ಮಿಕ ಪೂಜಾ ಕಾರ್ಯಕ್ರಮ ಮಾಡುವುದು, ಪ್ರತಿಭಟನೆ ನಡೆಸುವುದು ಹಾಗೂ ಯಾವುದೇ ರೀತಿಯ ಭಾವಚಿತ್ರ, ಬ್ಯಾನರ್, ಬಂಟಿಂಗ್ಸ್ ಹಾಕುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಮೆರವಣಿಗೆ, ಬೈಕ್ ರ್ಯಾಿಲಿ ಮತ್ತು ಇತರೆ ಯಾವುದೇ ರ್ಯಾೆಲಿಗಳಿಗೆ ಅವಕಾಶ ಇರುವುದಿಲ್ಲ. ಪಟಾಕಿ ಸಿಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಲೈವ್ ಎಲ್‌ಇಡಿ ಡಿಸ್‌ಪ್ಲೇ ಹಾಕುವುದನ್ನು ಕೂಡ ನಿಷೇಧಿಸಲಾಗಿದೆ. ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಪೂಜೆ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ. ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧ ಇರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಇದೆಲ್ಲದರ ನಡುವೆಯೂ ಪೂರ್ವ ನಿಗದಿಯಂತೆ ರಾಮಮಂದಿರ ಸಂಭ್ರಮಾಚರಣೆ ನಡೆಸಲು ಕಾರ್ಯಕ್ರಮ ಸಂಘಟಕರು ನಿರ್ಧರಿಸಿದ್ದಾರೆ. ಸುಮಾರು ೫೦೦ ವರ್ಷಗಳ ರಾಮಮಂದಿರ ನಿರ್ಮಾಣ ಹೋರಾಟಕ್ಕೆ ಫಲ ಸಿಗುತ್ತಿರುವ ಅವಿಸ್ಮರಣೀಯ ಕ್ಷಣ ಇದಾಗಿದೆ. ಇಡೀ ದೇಶಾದ್ಯಂತ ಹಿಂದೂಗಳು, ರಾಮಭಕ್ತರು ಈ ಸಂಭ್ರಮದ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶ್ರೀರಾಮಚಂದ್ರನ ಪೂಜೆ ಮಾಡಬಾರದು, ಫೋಟೋ ಇಡಬಾರದು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಘೋಷಣೆ ಕೂಗದೆ, ಮೆರವಣಿಗೆ ಮಾಡದೆ, ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಪ್ರಭು ಶ್ರೀರಾಮನಿಗೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಲಿದ್ದೇವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss