ದಾವಣಗೆರೆ: ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ಜನ್ಮದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನರೇಂದ್ರ ಮೋದಿಯವರ ಜನ್ಮದಿನ ಅಂಗವಾಗಿ ಬಿಜೆಪಿ ಇಡೀ ದೇಶಾದ್ಯಂತ ಕೈಗೊಂಡಿರುವ ಸೇವಾ ಸಪ್ತಾಹದಡಿಯಲ್ಲಿ ದಾವಣಗೆರೆಯಲ್ಲೂ ರಕ್ತದಾನ, ಪರಿಸರ ರಕ್ಷಣೆ, ಹಣ್ಣು ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯ ನಡೆಸಲಾಯಿತು. ಕೊರೋನಾ ಹಿನ್ನೆಲೆಯಲ್ಲಿ ಜನ್ಮದಿನವನ್ನು ಸರಳವಾಗಿ ಆಚರಿಸುವ ಉದ್ದೇಶದಿಂದ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸೇವಾ ಕಾರ್ಯಕ್ರಮ ನೆರವೇರಿಸಲಾಯಿತು.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ ರಕ್ತದಾನ ಶಿಬಿರ ಪ್ರಾರಂಭವಾಯಿತು. ಪಕ್ಷದ ಯುವ ಕಾರ್ಯಕರ್ತರು, ಮುಖಂಡರು, ನರೇಂದ್ರ ಮೋದಿಯವರ ಅಭಿಮಾನಿಗಳು ರಕ್ತದಾನ ಮಾಡಿದರು. ನಂತರ ನಿಟುವಳ್ಳಿಯ ಶ್ರೀ ದುರ್ಗಾಂಬಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವ ಮೂಲಕ ಪ್ರಧಾನಿಗಳಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡುವಂತೆ ಪ್ರಾರ್ಥಿಸಲಾಯಿತು. ಇಡೀ ದೇಶ ಕೊರೋನಾ ಮುಕ್ತಗೊಂಡು, ದೇಶಕ್ಕೆ ಒಳಿತಾಗಲೆಂದು ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪ್ರಧಾನಿಗಳ ಜನ್ಮದಿನವನ್ನು ಅರ್ಥಪೂರ್ಣಗೊಳಿಸಲಾಯಿತು. ಪಾರ್ಕ್ನಲ್ಲಿ ಗಿಡ ನೆಟ್ಟು ನೀರೆರೆಯುವ ಮೂಲಕ ಪರಿಸರ ರಕ್ಷಣೆ ಸಂದೇಶ ಸಾರಲಾಯಿತು. ಆನಂತರ ಚಾಮರಾಜಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ(ಹಳೆ ಹೆರಿಗೆ) ಆಸ್ಪತ್ರೆ ಹಾಗೂ ಬಾತಿ ಸಮೀಪದ ವೃದ್ಧಾಶ್ರಮಗಳಿಗೆ ತೆರಳಿ ಹಣ್ಣು-ಹಂಪಲು ವಿತರಣೆ ಮಾಡಲಾಯಿತು.
ಈ ಎಲ್ಲಾ ಕಾಯಕ್ರಮಗಳ ನೇತೃತ್ವವನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ ವಹಿಸಿದ್ದರು. ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ದಾವಣಗೆರೆ ಉತ್ತರ ಅಧ್ಯಕ್ಷ ಸಂಗನಗೌಡ್ರು, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತ ನಾಯ್ಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್.ಶಿವಪ್ರಕಾಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಹೇಶ್, ಪುಷ್ಪ ವಾಲಿ, ಪಿ.ಎಸ್.ಬಸವರಾಜ್, ನಾಗರಾಜ್, ಪಿ.ಸಿ.ಶ್ರೀನಿವಾಸ್, ಜಿಲ್ಲಾ ಮಾಧ್ಯಮ ಪ್ರಮುಖ್ ಹೆಚ್.ಪಿ.ವಿಶ್ವಾಸ್, ಮಂಜಾನಾಯ್ಕ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.