Wednesday, August 10, 2022

Latest Posts

ದಾವಣಗೆರೆ| ಹಿಂದೂ ಅಂಗಡಿಗಳಿಗೆ ಬಹಿಷ್ಕಾರ, ಐವರ ಬಂಧನ; ಇನ್ನುಳಿದವರ ಪತ್ತೆಗೆ ಕ್ರಮ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಹೊಸ ಬಟ್ಟೆ ಖರೀದಿಸಲು ಬಂದಿದ್ದ ಮುಸ್ಲಿಂ ಮಹಿಳೆಯರನ್ನು ಕೆಲ ಕಿಡಿಗೇಡಿಗಳು ಬೆದರಿಸಿ ಮನೆಗೆ ಕಳಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 5 ಮಂದಿಯನ್ನು ಬಂಧಿಸಿದ್ದು, ಇನ್ನುಳಿದವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಕಮಹಾದೇವಿ ರಸ್ತೆಯ ಬಿಎಸ್ಸಿ ಬಟ್ಟೆ ಅಂಗಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋಬ ನಗರದ ಸೈಯದ್ ಅಪಾಪ್ ಅಹಮದ್, ಫಯಾಜ್ ಅಹಮದ್, ಇಮ್ತಿಯಾಜ್, ಮನ್ಸೂರ್ ಎಂಬುವರನ್ನು ಬಂಧಿಸಲಾಗಿದೆ. ಬಸವ ನಗರ ಠಾಣೆ ವ್ಯಾಪ್ತಿಯ ಗಡಿಯಾರ ಕಂಬ ಘಟನೆ ಸಂಬಂಧ ಖಾಲಿದ್ ಪೈಲ್ವಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಹರಿಹರ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಬಿ.ಎಸ್.ಚನ್ನಬಸಪ್ಪ & ಸನ್ಸ್ ಬಟ್ಟೆ ಅಂಗಡಿಯಲ್ಲಿ ರಂಜಾನ್ ಪ್ರಯುಕ್ತ ಹೊಸ ಬಟ್ಟೆ ಖರೀದಿಸಿದ್ದ ಮಹಿಳೆಯರನ್ನು ತಡೆದ 8-10 ಯುವಕರ ಗುಂಪೊಂದು, ಬಟ್ಟೆ ಕಿತ್ತುಕೊಂಡು ತಮ್ಮ ಸಮುದಾಯವನ್ನು ದ್ವೇಷಿಸುವ ಇಂತಹವರ ಅಂಗಡಿಗಳಲ್ಲಿ ವ್ಯವಹರಿಸದಂತೆ ಬುದ್ಧಿ ಹೇಳಿ ಕಳಿಸಿತ್ತು. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಇದಕ್ಕೂ ಮುನ್ನ ನಗರದ ಗಡಿಯಾರ ಕಂಬ ಸಮೀಪದ ಬಟ್ಟೆ ಅಂಗಡಿ ಬಳಿಯೂ ನಡೆದಿದ್ದ ಇಂತಹದ್ದೇ ಘಟನೆಯ ವೀಡಿಯೊ ಕೂಡ ವೈರಲ್ ಆಗಿತ್ತು. ಕೊರೋನಾ ಹಾವಳಿ ನಡುವೆ ಸಮಾಜದಲ್ಲಿ ಕೋಮು ಸಾಮರಸ್ಯ ಕದಡುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿತ್ತು. ಇದೆಲ್ಲದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದ ಪಾಲಿಕೆ ಮೇಯರ್ ಹಾಗೂ ಮುಸ್ಲಿಂ ಸಮಾಜದ ಮುಖಂಡರು, ಸರಳ ರೀತಿಯಲ್ಲಿ ರಂಜಾನ್ ಆಚರಿಸಲು ನಿರ್ಧರಿಸಿರುವುದರಿಂದ ಹೊಸ ಬಟ್ಟೆ ಖರೀದಿಸದಿರಲು ತೀರ್ಮಾನಿಸಲಾಗಿದೆಯೇ ಹೊರತು ಯಾವುದೇ ಜಾತಿ, ಧರ್ಮದವರ ಅಂಗಡಿಗಳಲ್ಲಿ ವ್ಯವಹರಿಸದಂತೆ ತಡೆಯುವ ಕೆಲಸವಾಗಿಲ್ಲ ಎಂದು
ಸಮರ್ಥಿಸಿಕೊಂಡಿದ್ದರು.
ಹರಿಹರ ನಗರದಲ್ಲಿ ಸಹ ಕಿಡಿಗೇಡಿಗಳ ಗುಂಪೊಂದು ಶಾಪಿಂಗ್ ಬಂದಿದ್ದ ಮುಸ್ಲಿಂ ಮಹಿಳೆಯರನ್ನು ದಬಾಯಿಸಿ ಮನೆಗೆ ಕಳಿಸಿದ್ದು ವರದಿಯಾಗಿತ್ತು. ಈ ಕುರಿತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಸದ್ಯ ಐವರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಯಾರಿಗೂ ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ. ಯಾರಾದರೂ ಇಂತಹ ವರ್ತನೆ ತೋರಿದರೆ ಇಲಾಖೆ ಸಹಿಸುವುದಿಲ್ಲ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ಧಕ್ಕೆ
ಧಕ್ಕೆಯಾಗುವಂತಹ ವೀಡಿಯೋ, ಸಂದೇಶ ಕಳಿಸುವವರ ಮೇಲೆಯೂ ನಿಗಾ ವಹಿಸಲಾಗಿದೆ. ಅಂತಹದ್ದೇನಾದರೂ ಕಂಡುಬಂದಲ್ಲಿ ಬೇರೆಯವರಿಗೆ ಫಾರ್ವರ್ಡ್ ಮಾಡದೆ, ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಪ್ರಚೋದನಾಕಾರಿ ವೀಡಿಯೋ, ಸಂದೇಶ ವೈರಲ್ ಮಾಡುವವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಹನುಮಂತರಾಯ ಎಚ್ಚರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss