ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ಮತ್ತೆ 3 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ದಾವಣಗೆರೆಯಲ್ಲಿ ಕೊರೋನಾ ಮಹಾಸ್ಫೋಟಕ್ಕೆ ಕಾರಣವಾದ ಬಾಷಾ ನಗರ ಸ್ಟಾಫ್ ನರ್ಸ್ ಸೇರಿದಂತೆ 7 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊಸ ಪ್ರಕರಣಗಳಲ್ಲಿ 42 ವರ್ಷದ ಮಹಿಳೆ(ಪಿ.1656), 14 ವರ್ಷದ ಬಾಲಕಿ(ಪಿ.1657), 18 ವರ್ಷದ ಯುವಕನಲ್ಲಿ(ಪಿ.1658) ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಪಿ.1483 ಸಂಖ್ಯೆಯ ರೋಗಿಯೊಂದಿಗೆ ಸಂಪರ್ಕ ಹೊಂದಿದವರಾಗಿದ್ದಾರೆ.
ಶುಕ್ರವಾರ ಮೂರನೇ ಕಂತಿನಲ್ಲಿ ಗುಣಮುಖರಾದ 7 ಜನರನ್ನು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಇವರಲ್ಲಿ ಬಾಷಾ ನಗರ ನರ್ಸ್(ಪಿ.533) ಕೂಡ ಸೇರಿದ್ದು, ಈವರೆಗೆ ಪತ್ತೆಯಾಗಿರುವ ಬಹುತೇಕ ಕೊರೋನಾ ಸೋಂಕಿತರು ಪ್ರತ್ಯಕ್ಷ, ಪರೋಕ್ಷವಾಗಿ ಇವರ ಸಂಪರ್ಕ ಹೊಂದಿದವರಾಗಿದ್ದಾರೆ. ಇನ್ನುಳಿದಂತೆ, ಪಿ.581, ಪಿ.660, ಪಿ.661, ಪಿ.665, ಪಿ.666, ಪಿ.696 ಸಂಖ್ಯೆಯ ರೋಗಿಗಳು ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.
ಬುಧವಾರ 7, ಗುರುವಾರ 5, ಶುಕ್ರವಾರ 7 ಮಂದಿ ಸಹಿತ ಕಳೆದ ಮೂರು ದಿನಗಳ ಅವಧಿಯಲ್ಲಿ 19 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಹೀಗಾಗಿ ಈ ಮೊದಲೇ ಬಿಡುಗಡೆಯಾಗಿದ್ದ ವಿದೇಶ ಪ್ರವಾಸ ಹಿನ್ನೆಲೆಯ ಇಬ್ಬರು ಸೇರಿ ಒಟ್ಟು 21 ಮಂದಿ ಕೊರೋನಾ ವಿರುದ್ಧ ಗೆಲುವು ಸಾಧಿಸಿದಂತಾಗಿದೆ. ಈವರೆಗೆ 118 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. 21 ಮಂದಿ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ 93 ಸಕ್ರಿಯ ಪ್ರಕರಣಗಳಿವೆ.