ಹೊಸ ದಿಗಂತ ವರದಿ, ದಾವಣಗೆರೆ:
ಸಂಸದ ಜಿ.ಎಂ.ಸಿದ್ದೇಶ್ವರ, ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಗುರುವಾರ ದಾವಣಗೆರೆ ಮಹಾನಗರ ಪಾಲಿಕೆ ನಿಯೋಗವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿತು.
ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಎಂಬ ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಯಿತು. ಈ ವೇಳೆ ಸಿಎಂ ಯಡಿಯೂರಪ್ಪ ಮಾತನಾಡಿ, ತಾವು ಹಮ್ಮಿಕೊಂಡಿರುವ ಒಳ್ಳೆಯ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮೇಯರ್ ಬಿ.ಜಿ.ಅಜಯ್ ಕುಮಾರ್ ಅವರುಗಳು ನಗರದ 45 ವಾರ್ಡ್ಗಳ ಅಭಿವೃದ್ಧಿಗಾಗಿ ತಲಾ 1 ಕೋಟಿಯಂತೆ 45 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಪಾಲಿಕೆಗೆ ನೀಡುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಹಾತ್ಮ ಗಾಂಧಿ ಗ್ರಾಮ ವಿಕಾಸ ಯೋಜನೆಯಡಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 125 ಕೋಟಿ ರೂ. ಮಂಜೂರು ಮಾಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಒದಗಿಸುವ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ.ವೀರೇಶ್, ಪ್ರಸನ್ನ ಕುಮಾರ್ ಸೇರಿದಂತೆ ಸದಸ್ಯರು, ಆಯುಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.