ದಿನೇ ದಿನೇ ಹೆಚ್ಚುತ್ತಿವೆ ಕೊರೋನಾ ಹೊಸ ಪ್ರಕರಣಗಳು| ದಕ್ಷಿಣ ಕನ್ನಡ ಜಿಲ್ಲೆಗೆ ಮುಳುವಾಯಿತೇ ಲಾಕ್ ‌ಡೌನ್ ಸಡಿಲಿಕೆ?

0
251

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ. ಇತ್ತೀಚಿನ ಕೆಲವು ಹೊಸ ಪ್ರಕರಣಗಳು ಮಂಗಳೂರು ನಗರ ಸೇರಿದಂತೆ ಜಿಲ್ಲೆಯನ್ನು ಬೆಚ್ಚಿ ಬೀಳಿಸುತ್ತಿದೆ.
ಜನತೆಯ ಹಿತದೃಷ್ಟಿಯಿಂದ ಲಾಕ್‌ಡೌನ್ ಸಡಿಲಿಕೆ ಆಗಿದೆ. ಆದರೆ ಕೊರೋನಾ ಭಯಕ್ಕಿಂತಲೂ ಜನತೆಯ ನಿರ್ಲಕ್ಷ್ಯ ಹೆಚ್ಚಾಗಿರುವುದರಿಂದ ಈ ಸೋಂಕು ಸಮುದಾಯಕ್ಕೆ ಹರಡುವ ಲಕ್ಷಣ ಗೋಚರಿಸುತ್ತಿದೆ.
ಎರಡು ತಿಂಗಳ ಕಾಲ ಲಾಕ್‌ಡೌನ್‌ನಿಂದಾಗಿ ಜನಜೀವನ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡಿತ್ತು. ಜನತೆ ಮುಂಜಾಗೃತಾ ಕ್ರಮಗಳನ್ನು ವಹಿಸಿಯೇ ಓಡಾಡಬೇಕು. ತುರ್ತು ಕಾರ್ಯವಿದ್ದರೆ ಮಾತ್ರ ಹೊರಬರಬೇಕು ಎಂದು ಸೂಚನೆ ನೀಡಿತ್ತು. ಆದರೆ ಯಾವಾಗ ಲಾಕ್‌ಡೌನ್ ಸಡಿಲಿಕೆ ಆಯಿತೋ ಅಂದಿನಿಂದ ಜನತೆ ರಾಜಾರೋಷವಾಗಿ ಯಾವ ಭಯವೂ ಇಲ್ಲದೆ ಓಡಾಡಲಾರಂಭಿಸಿದರು. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದರೂ, ಕೊರೋನಾ ನಮಗೆ ಬಂದಿಲ್ಲ ಎಂಬ ಹುಂಬು ಧೈರ್ಯದಿಂದ ಓಡಾಡುತ್ತಿದ್ದಾರೆ. ಮಂಗಳೂರು ನಗರದಲ್ಲಂತೂ ಸಾರ್ವಜನಿಕರ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಕೊರೋನಾ ಹಳ್ಳಿಯವರೆಗೆ ಲಗ್ಗೆ ಇಟ್ಟಿದ್ದು, ಇದರಿಂದಾಗಿ ಜಿಲ್ಲೆಯ ಪ್ರತಿ ಮನೆ, ಗ್ರಾಮದ ಸುತ್ತಮುತ್ತ ಭೀತಿ ಹೆಚ್ಚಾಗುತ್ತಿದೆ. ಬಟ್ಟೆ ಮಳಿಗೆ, ಪೋಲೀಸ್ ಠಾಣೆ, ಆಸ್ಪತ್ರೆ ಹೀಗೆ ಪ್ರತಿಯೊಂದು ಕಡೆಯಿಂದ ಹೊಸ ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ಈ ಮಹಾಮಾರಿ ಅತಿ ಬೇಗನೆ ಸಮುದಾಯಕ್ಕೆ ಹಬ್ಬುವ ಭೀತಿ ಎದುರಾಗುತ್ತಿದೆ.
ಪೊಲೀಸರಾಯಿತು…ವೈದ್ಯರಾಯಿತು…
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಸ್‌ಐ ಮತ್ತು ಎಎಸ್‌ಐಗೆ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಇಡೀ ಠಾಣೆಯನ್ನೇ ಸೀಲ್‌ಡೌನ್ ಮಾಡಲಾಗಿದೆ. ಗುರುವಾರ ನಗರದಲ್ಲಿ ಐದು ಮಂದಿ ಯುವ ವೈದ್ಯರಲ್ಲಿ ಸೋಂಕು ಕಂಡು ಬಂದಿದೆ. ಪುತ್ತೂರಿನಲ್ಲೂ ಪ್ರಕರಣವೊಂದು ಪತ್ತೆಯಾಗಿದೆ. ಹೊಸ ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಇದರ ನಡುವೆ ಶುಕ್ರವಾರ ಮಂಗಳೂರು ನಗರದ ಬಟ್ಟೆ ಮಳಿಗೆಯೊಂದರ ಸಿಬ್ಬಂದಿಯ ತಂದೆಗೆ ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಆ ಬಟ್ಟೆ ಮಳಿಗೆಯನ್ನು ಮುಚ್ಚಲಾಗಿದೆ. ಇವೆಲ್ಲವೂ ಕೊರೋನಾ ಸಮುದಾಯಕ್ಕೆ ಹಬ್ಬುತ್ತಿರುವ ಮುನ್ಸೂಚನೆಯಾಗಿದೆ.
ಲಾಕ್ ಡೌನ್ ಸಡಿಲಿಕೆ ಆಗಿದೆ ಎಂದ ಮಾತ್ರಕ್ಕೆ ಜಿಲ್ಲೆ ಕೊರೋನಾದಿಂದ ಮುಕ್ತವಾಗಿದೆ ಎಂದರ್ಥವಲ್ಲ. ಆದರೆ ಸಾರ್ವಜನಿಕರ ನಿರ್ಲಕ್ಷ್ಯತನದ ಓಡಾಟದಿಂದ ಮಾರಿಯನ್ನು ಮನೆಗೆ ಕರೆದೊಯ್ಯುವಂತಾಗಿದೆ. ಇದರಿಂದ ಮನೆಯಲ್ಲಿರುವ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಅಪಾಯವನ್ನು ಎದುರಿಸುವತಾಗಿದೆ.
ಕ್ವಾರೆಂಟೈನ್ ಉಲ್ಲಂಘನೆ: 54 ಪ್ರಕರಣ ದಾಖಲು
ಇನ್ನು ವಿದೇಶ ಸೇರಿದಂತೆ ಬೇರೆ ಬೇಕೆ ಕಡೆಯಿಂದ ಬಂದು ಮಂಗಳೂರಿನ ವಿವಿಧೆಡೆ ಕ್ವಾರಂಟೈನ್‌ನಲ್ಲಿ ಇರುವವರು ನಿಯಮ ಉಲ್ಲಂಘಿಸಿ ಓಡಾಡುತ್ತಿರುವುದು ಹೆಚ್ಚಾಗುತ್ತಿದೆ. ಇದು ಮಹಾ ಕಂಟಕವಾಗಿ ಪರಿಣಮಿಸಿದೆ. ಜಿಲ್ಲಾಡಳಿತ ಇವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಂಭಾವ್ಯ ಅಪಾಯವನ್ನು ಹೇಳಲಾಗದು. ಇದೀಗ ಕ್ವಾರಂಟೈನ್‌ನಲ್ಲಿರುವವರು ನಿಯಮ ಉಲ್ಲಂಘಿಸುತ್ತಿರುವುದು ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಲಿತ ಎಚ್ಚೆತ್ತುರೊಂಡಿದೆ. ನಿಯಮ ಉಲ್ಲಂಘಿಸಿದ ೫೪ ಮಂದಿಯ ಮೇಲೆ ಕೇಸು ದಾಖಲಿಸಿದೆ. ಈ ರೀತಿ ಆರಂಭದಿಂದಲೇ ಕ್ರಮ ಕೈಗೊಂಡಿದ್ದರೆ ಸ್ವಲ್ಪಮಟ್ಟಿನ ಭಯವಾದರೂ ಇರುತ್ತಿತ್ತು.ಕ್ವಾರೆಂಟೈನ್ ಉಲ್ಲಂಘಿಸಿ ಮನೆಯ ಹೊರಗಡೆ ಸಂಚರಿಸುತ್ತಿರುವುದು ಖಚಿತವಾದ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಂಗಳೂರು ವ್ಯಾಪ್ತಿಯೊಂದರಲ್ಲಿಯೇ 44 ಮಂದಿಯ ಮೇಲೆ ಕೇಸು ದಾಖಲಾಗಿದೆ. ಪೂತ್ತೂರಿನಲ್ಲಿ 10 ಮಂದಿಯ ಮೇಲೆ ಕೇಸು ದಾಖಲಿಸಲಾಗಿದೆ.
ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಪ್ರತಿಯೊಬ್ಬರ ಮೇಲೂನಿಗಾ ಇಡಲಾಗಿದೆ. ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿಗಳಲ್ಲದೆ, ಇತರೆ ಇಲಾಖೆ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಅಕ್ಕಪಕ್ಕದ ಮನೆಯವರಲ್ಲೂ ಕ್ವಾರೆಂಟೈನ್ ಇರುವವರ ಮೇಲೆ ನಿಗಾ ಇಡಲು ತಿಳಿಸಲಾಗುತ್ತಿದೆ. ಕ್ವಾರಂಟೈನ್ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಖಡಕ್ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here