Sunday, June 26, 2022

Latest Posts

ದಿಲ್ಲಿ:‘ಹಿಂದುತ್ವ ಕಾರ್ಯಸೂಚಿ’ಗೆ ಸೋಲಾಗಿಲ್ಲ !

ಬಿಜೆಪಿಯ ‘ಹಿಂದುತ್ವ ಮತ್ತು ರಾಷ್ಟ್ರೀಯತೆ’ಯ ಕಾರ್ಯಸೂಚಿಯನ್ನು ಕೇಜ್ರಿವಾಲ್ ಸೋಲಿಸಿದರು ಎಂಬುದಾಗಿ ದಿಲ್ಲಿ  ಚುನಾವಣಾ ಫಲಿತಾಂಶವನ್ನು ಮೋದಿ ವಿರೋಧಿಗಳು, ‘ಜಾತ್ಯತೀತ’ ಪಕ್ಷಗಳು ವಿಶ್ಲೇಷಿಸುತ್ತಿವೆ. ಆದರೆ ಅವರಿಗೆ ಅರಿಯದ ಸತ್ಯವೆಂದರೆ ಕೇಜ್ರಿವಾಲ್ ಸ್ವತಃ ತಾವೇ  ಹಿಂದುತ್ವ ಮತ್ತು ರಾಷ್ಟ್ರೀಯತೆಯ ಕಾರ್ಯಸೂಚಿಯನ್ನು ಅಳವಡಿಸಿ ಗೆದ್ದರೆಂಬುದು.

ಆದ್ದರಿಂದ ದಿಲ್ಲಿ ಚುನಾವಣೆಯಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯತೆ ಖಂಡಿತಕ್ಕೂ ಸೋತಿಲ್ಲ. ಬದಲಾಗಿ ಅದುವೇ ಗೆದ್ದಿದೆ.

ಇತ್ತೀಚಿನ ವರ್ಷಗಳಲ್ಲಿ ಬೆಳೆದು ಬಂದಿರುವ ಹೊಸದೊಂದು ಸಕಾರಾತ್ಮಕ ಬೆಳವಣಿಗೆಯಿದು. ಹಿಂದುಗಳ ಮತಗಳನ್ನು ಕಡೆಗಣಿಸುವಂತಿಲ್ಲ ಎಂಬುದನ್ನು ಈಗ ಎಲ್ಲರೂ ಅರಿತಿದ್ದಾರೆ. ಮೊದಲೆಲ್ಲ ಹಿಂದುಗಳ ಮತಬ್ಯಾಂಕ್ ಬಗ್ಗೆ ಯಾರಿಗೂ ಕಾಳಜಿಯಿರಲಿಲ್ಲ. ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರ ಮತ ಬ್ಯಾಂಕ್ ಓಲೈಸಲು ಟೊಂಕ ಕಟ್ಟಿ ನಿಲ್ಲುತ್ತಿದ್ದವು.

ಆದರೆ ಮೋದಿಯವರು ಹಿಂದುತ್ವ ಮತ್ತು ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸಿ ಯಾವಾಗ ಗೆಲುವು ಸಾಧಿಸಲಾರಂಭಿಸಿದರೋ ಆಗ ಇತರ ಪಕ್ಷಗಳಿಗೂ ಹಿಂದು ಮತ ಬ್ಯಾಂಕಿನ ಅರಿವಾಗತೊಡಗಿತು.

ಅದಕ್ಕಾಗಿಯೇ ರಾಹುಲ್ ಗಾಂಧಿಯವರು ಕಳೆದ ಲೋಕಸಭಾ ಚುನಾವಣೆಯ ವೇಳೆ ದೇವಸ್ಥಾನಗಳಿಗೆ ಭೇಟಿ ನೀಡಲು ಆರಂಭಿಸಿದ್ದು, ತಾನು ಜನಿವಾರಧಾರಿ ಬ್ರಾಹ್ಮಣ ಎಂದು ಹೇಳಿಕೊಂಡುದು.

ಇದೀಗ ಈ ಸತ್ಯವನ್ನು ಕೇಜ್ರಿವಾಲ್ ಕೂಡ ಅರಿತಿದ್ದಾರೆ. ಅವರು ಈ ಬಾರಿಯ ಚುನಾವಣೆಯ ವೇಳೆ ಮೃದು ಹಿಂದುತ್ವದ ಚಾದರವನ್ನು ಹೊತ್ತುಕೊಂಡೇ ಗೆದ್ದಿದ್ದಾರೆ.

ಈ ಬಾರಿ ಕೇಜ್ರಿವಾಲ್ ಜಾತ್ಯತೀತ ಮುಖವಾಡ ಧರಿಸುವ ಬದಲಾಗಿ ತಾನು ಹನುಮಾನ್ ಭಕ್ತ ಎಂದೆನ್ನುತ್ತಲೇ ಜನರ ಮುಂದೆ ಬಂದರು. ಚುನಾವಣಾ ಪ್ರಚಾರದ ವೇಳೆ ಟಿವಿ ಸಂದರ್ಶನವೊಂದರಲ್ಲಿ ಹನುಮಾನ್ ಚಾಲಿಸಾ ಪಠಿಸಿದರು.

ಮೊನ್ನೆ ಚುನಾವಣೆಯಲ್ಲಿ ಗೆದ್ದ ಬಳಿಕ ಕೇಜ್ರಿವಾಲ್ ನುಡಿದರು “ಇಂದು ಮಂಗಳವಾರ. ಹನುಮಾನ್‌ಜೀಯ ದಿನವಿದು. ಹನುಮಾನ್‌ಗೆ ಧನ್ಯವಾದ ಅರ್ಪಿಸುತ್ತೇನೆ. ಹನುಮಾನ್ ನಮ್ಮ ದಿಲ್ಲಿಯನ್ನು ಹರಸಿದ್ದಾನೆ. ಅದಕ್ಕಾಗಿ ನಾನು ಹನುಮಾನ್‌ಗೆ ಕೃತಜ್ಞನಾಗಿದ್ದೇನೆ”

ನಂತರ ಸಂಜೆ ಕೇಜ್ರಿವಾಲ್ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದರು. ಅವರು ದೇವಾಲಯ ಸಮೀಪಿಸಿದಾಗ ಅವರ ಬೆಂಬಲಿಗರು “ಜೈ ಶ್ರೀರಾಮ್” ಘೋಷಣೆಗಳನ್ನು ಕೂಗಿದರು. ಬಳಿಕ ಕೇಜ್ರಿವಾಲ್ ವರದಿಗಾರರ ಜತೆ ಮಾತನಾಡುತ್ತಾ “ಹನುಮಾನ್‌ಜೀ ಎಲ್ಲರಿಗೂ ಒಳಿತು ಮಾಡುತ್ತಾನೆ” ಎಂದು ನುಡಿದರು.

ಅಲ್ಲಿಗೆ ಹಿಂದುಗಳನ್ನು ಒಲಿಸಿಕೊಳ್ಳುವ ಕಾರ್ಯವನ್ನೆಲ್ಲ ಕೇಜ್ರಿವಾಲ್ ಮಾಡಿದರು.

ಕೇಜ್ರಿವಾಲ್ ಬಿಜೆಪಿ ಪ್ರತಿಪಾದಿಸಿದ ರಾಷ್ಟ್ರೀಯತೆಯನ್ನು  ಕೂಡ ತಾವೂ ಬಳಸಿಕೊಂಡರು. ಆಪ್ ವಿಜಯೋತ್ಸವದ ವೇಳೆ ‘ಭಾರತ್ ಮಾತಾಕಿ ಜೈ’, ‘ವಂದೇ ಮಾತರಂ’ ಘೋಷಣೆಗಳು ಸಾಕಷ್ಟು ಕೇಳಿಬಂದವು. ಸ್ವಲ್ಪ ಕಾಲದ ಹಿಂದಿನವರೆಗೆ ಬಿಜೆಪಿಯೇತರ ಪಕ್ಷಗಳ ಸಭೆಗಳಲ್ಲಿ ವಂದೇ ಮಾತರಂ ಆಗಲಿ, ಜೈಶ್ರೀರಾಮ್ ಘೋಷಣೆಯಾಗಲಿ ಕೇಳಲು ಸಾಧ್ಯವಿತ್ತೆ ?

ಕಾಶ್ಮೀರದ ೨೭೦ ನೇ ವಿಧಿಯನ್ನು ರದ್ದುಪಡಿಸಿದ ಕ್ರಮವನ್ನು ಇತರೆಲ್ಲಾ ವಿರೋಧ ಪಕ್ಷಗಳು ವಿರೋಧಿಸಿದ್ದರೆ ಕೇಜ್ರಿವಾಲ್ ಮಾತ್ರ ಅದನ್ನು ಸ್ವಾಗತಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯ ವಿಷಯದಲ್ಲೂ ಅವರು ಅದನ್ನು ವಿರೋಧಿಸಿ ಮಾತನಾಡಲಿಲ್ಲ. ಬೆಂಬಲಿಸಲೂ ಇಲ್ಲ. ಬಾಯಿ ಮಾತಿಗೆ ವಿರೋಧಿಸಿದರಾದರೂ ಅವರು ಅದಕ್ಕೆ ನೀಡಿದ ಕಾರಣ, ಅದು ಭಾರತಕ್ಕೆ ಆರ್ಥಿಕವಾಗಿ ಹೊರೆಯಾಗಬಹುದು ಎಂಬ ಕಾರಣಕ್ಕಾಗಿ. ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಶಹೀನ್‌ಬಾಗ್‌ಗೆ ಕೇಜ್ರಿವಾಲ್ ಭೇಟಿ ನೀಡಲಿಲ್ಲ. ವಿವಾದಾಸ್ಪದ ಹೇಳಿಕೆ ನೀಡಿದ ಶಾರ್ಜಿಲ್ ಇಸ್ಲಾಮ್‌ನನ್ನು ಬಂಧಿಸುವಂತೆಯೂ ಕರೆ ನೀಡಿದರು. ಮೋದಿಯನ್ನು ಸೋಲಿಸುವಂತೆ ಕರೆ ನೀಡಿದ ಪಾಕಿಸ್ಥಾನಿ ಸಚಿವನಿಗೆ ತಿರುಗೇಟು ನೀಡಿದ ಕೇಜ್ರಿವಾಲ್, “ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವುದು ಬೇಡ, ಮೋದಿ ನನಗೂ ಪ್ರಧಾನಿ” ಎಂದೆನ್ನುವ ಮೂಲಕ ರಾಷ್ಟ್ರೀಯವಾದಿಗಳ ಮನ ಗೆದ್ದರು.

ಇವೆಲ್ಲವನ್ನು ನೋಡುವಾಗ ಮುಂದಿನ ಬಿಹಾರ ಮತ್ತು ಪಶ್ಚಿಮ ಬಂಗಾಳ ಚುನಾವಣೆಯ ವೇಳೆ ಬಿಜೆಪಿಯೇತರ ಪಕ್ಷಗಳ ಮುಖಂಡರೂ ಹಿಂದುತ್ವ ನೀತಿಯನ್ನು ಪ್ರತಿಪಾದಿಸುತ್ತಾ ಚುನಾವಣೆಗಿಳಿದರೆ ಅಚ್ಚರಿ ಪಡಬೇಕಿಲ್ಲ. ಮಮತಾ ಬ್ಯಾನರ್ಜಿ ದುರ್ಗೆಯನ್ನು ಸ್ತುತಿಸುತ್ತಾ ಚುನಾವಣೆಗಿಳಿದರೂ ಅಸಹಜತೆಯೇನಿಲ್ಲ.

ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಕಾರ್ಯಸೂಚಿಯನ್ನು ಅನುಸರಿಸಿ ಸೋತಿತು ಎಂದು ಹೇಳುವವರಿದ್ದಾರೆ. ಬಿಜೆಪಿ ಸೋತಿರಬಹುದು. ಆದರೆ ಹಿಂದುತ್ವ ಮತ್ತು ರಾಷ್ಟ್ರೀಯತೆಯು ಬಿಜೆಪಿಗೆ ಕೂಡ ಹೆಚ್ಚು ಮತಗಳನ್ನು ನೀಡಿದೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಮತಪ್ರಮಾಣವು ಶೇ. ೬.೩೨ರಷ್ಟು ಹೆಚ್ಚಾಗಿದೆ. ಬಿಜೆಪಿ ಈ ಬಾರಿ ೩೮.೫೧ ಶೇ. ಮತ ಗಳಿಸಿದೆ. ಆಪ್‌ಗೆ ಕಳೆದ ವಿಧಾನಸಭಾ ಚುನಾವಣೆಗಿಂತ ಶೇ.೦.೭೭ರಷ್ಟು  ಕಡಿಮೆ ಮತವಾಗಿದೆ.

ಶಹೀನ್‌ಬಾಗ್ ಪ್ರತಿಭಟನೆಯನ್ನು ಹೈಲೈಟ್ ಮಾಡಿದರೂ ಬಿಜೆಪಿ ಗೆಲ್ಲಲಾಗಲಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಶಹೀನ್‌ಬಾಗ್ ಪ್ರತಿಭಟನೆಯು ಆ ಪ್ರದೇಶದಲ್ಲಿ ಬಿಜೆಪಿಯ ಮತ ಗಳಿಕೆ ಪ್ರಮಾಣವನ್ನು ಭಾರೀ ಏರಿಸಿದ್ದು ಸುಳ್ಳಲ್ಲ. ಶಹೀನ್ ಬಾಗ್ ಇರುವ ಒಕ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಕೊನೆ ಹಂತದವರೆಗೂ ತೀವ್ರ ಪೈಪೋಟಿಯಿತ್ತು. ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದರೂ ಬಿಜೆಪಿ ಪ್ರಬಲ ಸ್ಪರ್ಧೆ ನೀಡಿತ್ತು. ಬಿಜೆಪಿ ಸೋತುದು ಕೂಡ ಭಾರೀ ಕಡಿಮೆ ಅಂತರದಲ್ಲಿ.

ಒಟ್ಟಾರೆಯಾಗಿ ಹೇಳಬೇಕೆಂದರೆ ಬಿಜೆಪಿಯು ಹಿಂದುತ್ವ ಮತ್ತು ರಾಷ್ಟ್ರೀಯತೆಯನ್ನು ಪ್ರತಿಪಾದಿಸಿ ಸೋತುದಲ್ಲ. ಇವೆರಡರೊಂದಿಗೆ  ದಿಲ್ಲಿಯ ಸಾಮಾನ್ಯ ಸಮಸ್ಯೆಗಳ ಕುರಿತೂ ಗಮನ ಹರಿಸದೆ ಇದ್ದುದರಿಂದ ಸೋತಿತು. ಕೇಜ್ರಿವಾಲ್ ಗೆದ್ದುದೇಕೆಂದರೆ ಅವರು ಮೃದು ಹಿಂದುತ್ವ ಮತ್ತು ರಾಷ್ಟ್ರೀಯತೆಯ ಜತೆಜತೆಗೇ ದಿಲ್ಲಿಯ ಜನರ ಸಮಸ್ಯೆಗೆ ಸ್ಪಂದಿಸಿದರು ಹಾಗೂ ಅವರಿಗೆ ಹಲವಾರು ‘ಉಚಿತಗಳ ಕೊಡುಗೆ’ ನೀಡಿದರು. ಅದು ಫಲಿತಾಂಶದಲ್ಲಿ ವ್ಯತ್ಯಾಸ ತಂದಿತು.

ಇತ್ತೀಚೆಗಷ್ಟೆ ಆರೆಸ್ಸೆಸ್ ಮುಖಂಡ ಸುರೇಶ್ ಭಯ್ಯಾಜಿಯವರು ನುಡಿದಿದ್ದರು “ಹಿಂದು ಸಮುದಾಯ ಎಂದರೆ ಬಿಜೆಪಿ ಎಂದರ್ಥವಲ್ಲ. ಬಿಜೆಪಿಯನ್ನು ವಿರೋಧಿಸುವುದೆಂದರೆ ಹಿಂದು ವಿರೋಧಿ ಎಂದರ್ಥವಲ್ಲ.”

ಈಗ ಬಹುತೇಕ ರಾಜಕೀಯ ಪಕ್ಷಗಳು ಹಿಂದುಗಳನ್ನು ಓಲೈಸತೊಡಗಿವೆ. ಹಿಂದು ಓಟುಗಳನ್ನು ಕಡೆಗಣಿಸಲಾಗದೆಂದು ಅವುಗಳಿಗೆ ಅರಿವಾಗಿದೆ. ದಶಕಗಳ ಹಿಂದೆ ಕಲ್ಪಿಸಿಕೊಳ್ಳಲಾರದ ದೃಶ್ಯವಿದು. ಒಂದಂತೂ ನಿಜ, ಭಾರತದ ರಾಜಕಾರಣದ ಹೊಸ ಆಯಾಮದತ್ತ ಹೊರಳುವ ಲಕ್ಷಣ ತೋರುತ್ತಿದೆ! ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವು ನಿಷ್ಫಲವಾಗುವ ಸಂಕೇತಗಳು ತೋರುತ್ತಿವೆ.

-ಉಮೇಶ್ .ಎನ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss