Friday, July 1, 2022

Latest Posts

ದಿಲ್ಲಿ ಚುನಾವಣೆ ಕಲಿಸುವ ಪಾಠಗಳು

ದಿಲ್ಲಿಯ ವಿಧಾನಸಭಾ ಚುನಾವಣೆಯಲ್ಲಿ ಆಪ್ ಭರ್ಜರಿ ಜಯ ಸಾಧಿಸಿರುವುದು ಸಹಜವಾಗೇ ಬಹಳಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಆದರೆ ಚುನಾವಣಾ ಫಲಿತಾಂಶದ ಮಹತ್ವವನ್ನು ಅರಿತುಕೊಳ್ಳುವ ಮೊದಲು, ಈ ಫಲಿತಾಂಶವು ಯಾವುದಕ್ಕೆ ಮಹತ್ವ ನೀಡಿಲ್ಲ ಎಂಬುದನ್ನೂ ಅರಿತುಕೊಳ್ಳಬೇಕು.
ಮೊತ್ತ ಮೊದಲಾಗಿ ಹೇಳಬೇಕೇಂದರೆ ದಿಲ್ಲಿ ಚುನಾವಣಾ ಫಲಿತಾಂಶವು 2019ರ  ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಗಳಿಸಿದ ಭರ್ಜರಿ  ಜನತೀರ್ಪನ್ನು ಖಂಡಿತವಾಗಿಯೂ ಕಳೆಗುಂದಿಸಿಲ್ಲ. ಅವರ ಜನಪ್ರಿಯತೆಗೇನೂ ಕುಂದುಂಟಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ರಾಷ್ಟ್ರೀಯ ಚುನಾವಣೆ ಮತ್ತು ರಾಜ್ಯಗಳ ಚುನಾವಣೆಯಲ್ಲಿ ಪ್ರತ್ಯೇಕ ರೀತಿಯಲ್ಲಿ ಮತ ಚಲಾಯಿಸುವುದು ಹೆಚ್ಚುತ್ತಿದೆ. ಹರ್ಯಾಣ ಮತ್ತು ಜಾರ್ಖಂಡ್ ಚುನಾವಣೆಗಳಲ್ಲೂ ಇದು ವ್ಯಕ್ತವಾಗಿದೆ. ಅದುವೇ ಈಗ ದಿಲ್ಲಿಯಲ್ಲೂ ಪ್ರತಿಫಲಿಸಿದೆ. ಇಂಡಿಯಾ ಟುಡೇ ಜನವರಿಯಲ್ಲಿ ದೇಶವ್ಯಾಪಿ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ಈಗ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿಗೆ ಮತ್ತು ಅದರ ಮಿತ್ರಪಕ್ಷಗಳಿಗೆ ಮುನ್ನೂರಕ್ಕೂ ಅಧಿಕ ಸ್ಥಾನಗಳು ಲಭಿಸಲಿವೆ ಎಂಬುದು ಗಮನಾರ್ಹ.

ಎರಡನೆಯದಾಗಿ, ಶಹೀನ್‌ ಭಾಗ್‌ನಲ್ಲಿ ಮುಸ್ಲಿಂ ಮಹಿಳೆಯರಿಂದ ನಡೆಯುತ್ತಿರುವ ಪ್ರತಿಭಟನೆಗೆ ವ್ಯಾಪಕ ಪ್ರಚಾರ ದೊರಕಿದ ಹೊರತಾಗಿಯೂ ಪೌರತ್ವ ತಿದ್ದುಪಡಿ ಕಾಯ್ದೆಗೆ ಜನರ ವಿರೋಧವಿಲ್ಲವೆಂಬುದು ದಿಲ್ಲಿ ಚುನಾವಣೆಯಿಂದ ಗೊತ್ತಾಗಿದೆ. ಇದಕ್ಕೆ ವಿರುದ್ಧವಾಗಿ ಚುನಾವಣಾ ಪ್ರಚಾರದ ಕೊನೆಯ ದಿನಗಳಲ್ಲಿ ಅಮಿತ್ ಶಾ ಅವರು ಪೌರತ್ವ ಕಾಯ್ದೆಯ ಪರವಾಗಿ ನಡೆಸಿದ ಆಕ್ರಮಣಕಾರಿ ಪ್ರಚಾರಾಂದೋಲನವು ಬಿಜೆಪಿಯ ಮತ ಗಳಿಕೆಯನ್ನು ಶೇ. 10ರಷ್ಟು ಹೆಚ್ಚಿಸಿದೆ.  ಬಿಜೆಪಿ ಕೇವಲ 8 ಸ್ಥಾನಗಳನ್ನು ಗೆದ್ದಿರಬಹುದಾದರೂ 1993ರಲ್ಲಿ ದಿಲ್ಲಿ ವಿಧಾನಸಭೆ ರಚಿಸಿದಂದಿನಿಂದ ಬಿಜೆಪಿ ಗಳಿಸಿದ ಅತಿ ಹೆಚ್ಚು ಮತ ಪ್ರಮಾಣ ಈ ಬಾರಿಯದ್ದಾಗಿದೆ. ಆರಂಭಿಕ ಸಮೀಕ್ಷೆಗಳು ಬಿಜೆಪಿಯ ಮತ ಗಳಿಕೆ ಶೇ. 30ನ್ನು ದಾಟುವುದಿಲ್ಲ ಎಂದು ಹೇಳಿದ್ದವು. ಆದರೆ ಅಮಿತ್‌ ಶಾ ಅವರ  ಬಿರುಸಿನ ಪ್ರಚಾರವು ಬಿಜೆಪಿಗೆ ಹೆಚ್ಚು ಬಲ ತುಂಬಿದ್ದು ಸ್ಪಷ್ಟವಾಗಿದೆ. ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪೌರತ್ವ ಕಾಯ್ದೆ ಪರ ಪ್ರಚಾರವು ಪರಿಣಾಮ ಬೀರಲಾರದೆಂದು  ಹೇಳುವವರು ಈ ವಿಷಯದಲ್ಲಿ ಎಡವುತ್ತಿದ್ದಾರೆಂದು ಅರ್ಥ. ಪಶ್ಚಿಮ ಬಂಗಾಳದಲ್ಲಿ ಪೌರತ್ವ ಕಾಯ್ದೆಯು ಕೇವಲ ರಾಷ್ಟ್ರೀಯ ವಿಷಯವಲ್ಲ, ಅದು ಸ್ಥಳೀಯ ವಿಷಯವೂ ಆಗಿದೆ. ಪೌರತ್ವ ಕಾಯ್ದೆಯಿಂದ ಹೆಚ್ಚು ಲಾಭ ಪಡೆಯುವವರು ಪೂರ್ವ ಭಾರತದವರೇ ಆಗಿದ್ದಾರೆ. ಅದರಲ್ಲಿ ಮುಖ್ಯವಾಗಿ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಿಹಾರಗಳಲ್ಲಿ ಪೌರತ್ವ ಕಾಯ್ದೆ ಮಹತ್ವದ ಪರಿಣಾಮ ಬೀರಲಿದೆ.
ದಿಲ್ಲಿಯಲ್ಲಿ ರಾಷ್ಟ್ರೀಯ ವಿಚಾರ ಮತ್ತು ಸ್ಥಳೀಯ ವಿಚಾರಗಳ ಮಧ್ಯೆ ಸ್ಪಷ್ಟ ಭೇದವಿದೆ. ಬಿಜೆಪಿ ಸೋತದ್ದು ಎಲ್ಲಿಯೆಂದರೆ ಅದು ಆಪ್ ಸರಕಾರದ ಕಲ್ಯಾಣ ಕಾರ್‍ಯಕ್ರಮಗಳ ಬಗ್ಗೆ ಸೂಕ್ತ ಪ್ರತ್ಯುತ್ತರ ಹುಡುಕಲು ವಿಫಲವಾದುದು.ಕಳೆದ ಐದು ವರ್ಷಗಳಲ್ಲಿ ಆಪ್ ಸರಕಾರವು ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ. ಉಚಿತ ವಿದ್ಯುತ್, ಉಚಿತ ನೀರು, ಸರಕಾರಿ ಶಾಲೆಗಳ ಸುಧಾರಣೆ ಮುಂತಾದವು ಜನರ ಮೆಚ್ಚುಗೆ ಗಳಿಸಿದ್ದವು. ಇವು ಮೋದಿಯವರ ಜನಪ್ರಿಯ ಉಜ್ವಲ ಯೋಜನೆ ಮತ್ತು ಕಿಸಾನ್ ಸಮ್ಮಾನ್‌ ಯೋಜನೆಗೆ ಸರಿಸಮಾನಾಗಿದ್ದವು. ಇದಕ್ಕೆ ಪ್ರತಿಯಾಗಿ ದಿಲ್ಲಿ ಬಿಜೆಪಿ ಪರ್ಯಾಯ ಕಾರ್‍ಯಕ್ರಮಗಳನ್ನು ಘೋಷಿಸದಿದ್ದುದು ಪಕ್ಷಕ್ಕೆ ಪ್ರತಿಕೂಲವಾಯಿತು. ಬಿಜೆಪಿ ಸ್ಥಳೀಯ ವಿಷಯಗಳಿಗೆ ಪ್ರಾಧಾನ್ಯತೆ ಕೊಡದಿರುವುದು ಮುಳುವಾಯಿತು.
ಇದರ ಸಂದೇಶ ಸ್ಪಷ್ಟವಾಗಿದೆ. ಯಾವುದೇ ಸೈದ್ಧಾಂತಿಕ ವಿಷಯಗಳನ್ನು ಮುಂದೆ ಮಾಡುವುದಾದರೂ ಅದರ ಜತೆಗೇ ಸ್ಥಳೀಯ ವಿಷಯಗಳಿಗೂ ಆದ್ಯತೆ ಕೊಡಬೇಕಾದುದು ಮುಖ್ಯವಾಗಿದೆ.
2002, 2007 ಮತ್ತು 2012ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ  ಭಾವನಾತ್ಮಕ ಮತ್ತು ಸೈದ್ಧಾಂತಿಕ ವಿಷಯಗಳು ಮೋದಿ ಸರಕಾರ ಅಧಿಕಾರಕ್ಕೆ ಬರುವಲ್ಲಿ  ನೆರವಾದುದು ನಿಜವಾದರೂ ಅದರ ಜತೆಗೆ ಸರಕಾರವು ಸ್ಥಳೀಯವಾಗಿ ಮಾಡಿದ ಸಾಧನೆಗಳೂ ಅದರ ಜತೆಗಿದ್ದವು. ಸ್ಥಳೀಯ ವಿಷಯ ಮತ್ತು ಸೈದ್ಧಾಂತಿಕ ವಿಷಯಗಳನ್ನು ಮಿಳಿತಗೊಳಿಸಿದ್ದರಿಂದಲೇ ಮೋದಿಯವರ ಗೆಲುವು ಸುಲಭವಾಗಿತ್ತು.

ಮೋದಿ ಮಾದರಿಯ ಒಂದು ಲಕ್ಷಣವೆಂದರೆ ಪಕ್ಷದ  ಸ್ಥಳೀಯ ಸಂಘಟನೆಗೆ ಮಹತ್ವ ನೀಡುವುದು. ಬಿಜೆಪಿಯ ಚುನಾವಣಾ ಪ್ರಚಾರವು ಪಕ್ಷದ ತಳಮಟ್ಟದ ಸಂಘಟನೆಯ ನೆರವಿನಿಂದ ರೂಪಿಸಲ್ಪಟ್ಟಾಗಲೆಲ್ಲಾ ಪಕ್ಷವು ಉತ್ತಮ ನಿರ್ವಹಣೆ ತೋರಿದೆ. ಈ ಪ್ರಚಾರ ಕಾರ್ಯವು ವರ್ಷವಿಡೀ ಕಾಣುವಂತದ್ದಾಗಿರಬೇಕೇ ಹೊರತು ಕೇವಲ ಚುನಾವಣೆಯ ಸಮಯದಲ್ಲಲ್ಲ. ಆದರೆ ದಿಲ್ಲಿಯಲ್ಲಿ 2017ರ ಸ್ಥಳೀಯ ಸಂಸ್ಥೆ ಗೆಲುವಿನ ಬಳಿಕ ಪಕ್ಷದಲ್ಲಿ ಒಳಜಗಳ ಮತ್ತು ಆತ್ಮಸಂತೃಪ್ತಿ ಬೆಳೆದು ಬಂದಿತು. ವರ್ಷವಿಡೀ ಸಂಘಟನಾ ಕಾರ್ಯದಲ್ಲಿ ತೊಡಗಿದ್ದುದೂ ಕಂಡುಬರಲಿಲ್ಲ. ಚುನಾವಣೆ ವೇಳೆಗಷ್ಟು ಪಕ್ಷವು ಎಚ್ಚತ್ತುಕೊಂಡಿತು.
ಕೇಜ್ರಿವಾಲ್‌ಗೆ ಪರ್ಯಾಯವಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿದ್ದುದು ಕೂಡಾ ಬಿಜೆಪಿಗೆ ಮುಳುವಾಯಿತು ಎಂದು ಹೇಳಲಾಗುತ್ತಿದೆ.  ಹಿಂದಿನೆಲ್ಲಾ ದಿಲ್ಲಿ ಚುನಾವಣೆಗಳಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುತ್ತಿತ್ತು. ಹಾಗೆಂದು ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿದಾಗ ಫಲಿತಾಂಶ ಭಿನ್ನವಾಗುತ್ತದೆ ಎಂಬ ನಿದರ್ಶನಗಳೇನಿಲ್ಲ. ಈ ಕುರಿತಂತೆ ಮಿಶ್ರ ಅಭಿಪ್ರಾಯಗಳಿವೆ. ಮುಂಬರುವ ಅಸ್ಸಾಂ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. ಪ. ಬಂಗಾಳದಲ್ಲಿ ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿ ಸ್ಪಷ್ಟವಾಗಿಲ್ಲ. ಈ ಕುರಿತಂತೆ ಬಿಜೆಪಿ ಕೇಂದ್ರೀಯ ನಾಯಕತ್ವ ಗಮನಹರಿಸಬೇಕಾಗಿದೆ.

ಕೊನೆಯದಾಗಿ ಪ್ರಚಾರದಲ್ಲಿ ಬಳಸಿದ ಭಾಷೆಯ ಬಗ್ಗೆ, ಚುನಾವಣಾ ಪ್ರಚಾರದಲ್ಲಿ ಅತಿರೇಕವೆಂಬುದು ಸಹಜವೇ ಆದರೂ ಬಿಜೆಪಿಯ ಇಬ್ಬರು ಸಂಸದರು ಮಾತ್ರ ಮಿತಿಮೀರಿ ತಮ್ಮ ನಾಲಗೆ ಹರಿಯಬಿಟ್ಟರು. ಅಮಿತ್ ಶಾ ಕೂಡ ಇತ್ತೀಚೆಗೆ ಆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದರು.ಆದರೆ ಹಾನಿ ಅದಾಗಲೇ ತಟ್ಟಿಯಾಗಿತ್ತು. ಮುಖ್ಯವಾಗಿ ಇಂತಹ ಮಾತುಗಳು ಮಹಿಳಾ ಮತದಾರರ ಮೇಲೆ ಪರಿಣಾಮ ಬೀರುತ್ತವೆ. ಎಕ್ಸಿಟ್ ಪೋಲ್‌ಗಳು ತಿಳಿಸುವ ಪ್ರಕಾರ ಶೇ. 60 ಮಹಿಳೆಯರು ಆಪ್‌ಗೆ ಓಟ್ ಹಾಕಿದ್ದರು. ಶೇ. 35 ಮಾತ್ರ ಬಿಜೆಪಿಗೆ ಮತ ಹಾಕಿದ್ದರು. ಪುರುಷ ಮತದಾರರಲ್ಲಿ ಶೇ. 49 ಆಪ್‌ಗೆ ಮತ್ತು ಶೇ. 43 ಬಿಜೆಪಿಗೆ ಮತ ಹಾಕುವ ಮೂಲಕ ಬಹುತೇಕವಾಗಿ ಮತ ಪ್ರಮಾಣ ಸಮಾನವಾಗಿ ಹಂಚಿಕೆಯಾಗಿತ್ತು.
ಇಲ್ಲಿ ಕಲಿಯಬೇಕಾದ ಪಾಠ ಸ್ಪಷ್ಟವಾಗಿದೆ. ಆಕ್ರಮಣಶೀಲತೆಯು ಒಂದು ಮಿತಿಯಲ್ಲಿದ್ದಾಗ ಅದು ಸಹ್ಯ. ಆದರೆ ಲಕ್ಷ್ಮಣರೇಖೆ ದಾಟಿದರೆ ಅದು ಅಪ್ರಿಯವಾಗುತ್ತದೆ. ಇದು ದಿಲ್ಲಿಗಷ್ಟೇ ಅಲ್ಲದೆ ಎಲ್ಲಾ ಕಡೆಗೂ ಅನ್ವಯವಾಗುವ ಪಾಠ. ಪ್ರತಿಯೊಂದು ಚುನಾವಣೆಯೂ ಪ್ರಮುಖ ಪಾಠಗಳನ್ನು ಕಲಿಸುತ್ತದೆ. ಆ ಪಾಠಗಳನ್ನು ಕಲಿತು ತಿದ್ದಿಕೊಳ್ಳುವ ಪಕ್ಷಗಳು ಭವಿಷ್ಯದಲ್ಲಿ ಲಾಭ ಪಡೆಯುತ್ತವೆ.

-ಸ್ವಪನ್ ದಾಸ್‌ಗುಪ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss