ದಿಲ್ಲಿ: ಕೊರೋನಾದಿಂದ ಮೃತಪಟ್ಟವರ ಶವಗಳನ್ನು ಸೂಕ್ತವಾಗಿ ನಿರ್ವಹಿಸುವ ಜವಾಬ್ದಾರಿ ಇಲ್ವೇ ? ದಿಲ್ಲಿಯ ಆಸ್ಪತ್ರೆಗಳ ವಾರ್ಡ್ಗಳು ಮಾತ್ರವಲ್ಲ, ಪ್ರವೇಶಾಂಗಣ, ನಿರೀಕ್ಷಣಾ ಕೊಠಡಿಗಳಲ್ಲೂ ಹೆಣಗಳನ್ನು ಒಟ್ಟಾರೆ ಬಿಸಾಕಿದಂತಹ ಸನ್ನಿವೇಶವಿರುವುದು ತೀರಾ ದಯನೀಯ, ಭಯಾನಕ ಮತ್ತು ಅಸಹನೀಯ ಎಂದು ಸರ್ವೋಚ್ಚ ನ್ಯಾಯಾಲಯ ದಿಲ್ಲಿಯ ಕೇಜ್ರಿವಾಲ್ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಮೃತದೇಹಗಳನ್ನು ಈ ತೆರ ಅಗೌರವದಿಂದ ಕಾಣುವುದು ಖಂಡಿತ ಸರಿಯಲ್ಲವೆಂದು ನ್ಯಾಯಮೂರ್ತಿ ಅಶೋಕ್ ಭೂಷಣ್, ಎಸ್.ಕೆ.ಕೆಲ್ ಹಾಗೂ ಎಂ.ಆರ್.ಶಾಹ್ ಅವರನ್ನೊಳಗೊಂಡ ನ್ಯಾಯಪೀಠ ಈ ಕುರಿತ ಪತ್ರಿಕಾ ವರದಿಗಳನ್ನೋದಿ ಸ್ವಯಂಪ್ರೇರಿತವಾಗಿ ನಿರ್ಣಯಿಸಿದೆ.
ಕೇಂದ್ರ ಪರ ಪ್ರತಿನಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಇತರ ರೋಗಿಗಳ ಪಕ್ಕದಲ್ಲೇ ಶವಗಳನ್ನು ಮಲಗಿಸುವ ಸನ್ನಿವೇಶವಿದೆ ಎಂದು ನ್ಯಾಯಪೀಠದ ಗಮನ ಸೆಳೆದಿದ್ದು, ನ್ಯಾಯಪೀಠ ಇದನ್ನು ಗಂಭೀರ ಪರಿಗಣಿಸಿತು. ಆಸ್ಪತ್ರೆಗಳು ಕೊರೋನಾದಿಂದ ವ್ಯಕ್ತಿ ಮೃತಪಟ್ಟ ವಿಷಯವನ್ನು ಸಂಬಂತ ಕುಟುಂಬಗಳಿಗೆ ತಿಳಿಸದಿರುವುದು, ಮೃತ ಅಂತ್ಯವಿ ನೆರವೇರಿಸುವ ಅವಕಾಶದಿಂದಲೂ ಕುಟುಂಬ ಸದಸ್ಯರನ್ನು ವಂಚಿಸುತ್ತಿರುವುದು ತೀರಾ ಅನ್ಯಾಯವೆಂದು ನ್ಯಾಯಪೀಠ ತೀಕ್ಷ್ಣವಾಗಿ ಅಭಿಪ್ರಾಯಿಸಿದೆ. ದಿಲ್ಲಿಯಲ್ಲಿ ಕೊರೋನಾ ನಿಯಂತ್ರಣ ಕ್ರಮಗಳೇ ಸರಿಯಾಗಿಲ್ಲ. ಚೆನ್ನೈ, ಮುಂಬೈ ಮಹಾನಗರಗಳನ್ನು ಹೋಲಿಸಿದರೆ ದೇಶದ ರಾಜಧಾನಿಯಲ್ಲಿ ಕೊರೋನಾ ಪರೀಕ್ಷಾ ಪ್ರಮಾಣ ಕೂಡಾ ತೀರಾ ಕಡಿಮೆ. ತಾಂತ್ರಿಕ ಕಾರಣವೊಡ್ಡಿ ವೈದ್ಯಕೀಯ ಪರೀಕ್ಷೆ ಅಥವಾ ಚಿಕಿತ್ಸೆಯ ನಿರಾಕರಣೆ ಅಕ್ಷಮ್ಯ. ಜನರು ತಮ್ಮ ಆರೋಗ್ಯ ಸ್ಥಿತಿ ಅರಿಯಬೇಕಾದರೆ ಅವರನ್ನು ಪರೀಕ್ಷೆಗೊಳಪಡಿಸುವುದು ದಿಲ್ಲಿ ಸರಕಾರದ ಕರ್ತವ್ಯ ಎಂದು ನ್ಯಾಯಪೀಠ ಪ್ರತಿಪಾದಿಸಿದೆ.