Tuesday, July 5, 2022

Latest Posts

ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆಯ ಬಹುತೇಕ ಸಾಧ್ಯತೆಗಳಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಶನಿವಾರ ದೇವೀರಮ್ಮನವರ ಬೆಟ್ಟದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವರಿಷ್ಠರು ಬಿಹಾರದಲ್ಲಿ ಸರ್ಕಾರ ರಚಿಸುವ ವಿದ್ಯಮಾನಗಳಲ್ಲಿ ಇರುವುದರಿಂದ ಮುಖ್ಯಮಂತ್ರಿಗಳಿಗೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಹಬ್ಬದ ಬಳಿಕ ಸಿಎಂ ದೆಹಲಿಗೆ ಹೋಗಿ ಸಮಾಲೋಚನೆ ನಡೆಸಿ ವಿಸ್ತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಮನಸಿನಲ್ಲಿ ಸಂಪುಟ ಪುನರ್‍ರಚನೆ ಅಥವಾ ವಿಸ್ತರಣೆಯ ಯೋಜನೆ ಇದೆ. ಅದು ವರಿಷ್ಠರ ಜೊತೆ ಚರ್ಚೆ ನಡೆಸಿ ಅನುಮತಿ ಪಡೆದ ನಂತರ ಅದಕ್ಕೆ ಚಾಲನೆ ಸಿಗಲಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಗೂ ಇದೇ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಬರಲಿದ್ದಾರೆ ಎಂದ ಅವರು, ಜಿಲ್ಲೆಯವರಿಗೆ ಅವಕಾಶ ಸಿಗಲಿದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ ಅದು ಮುಖ್ಯಮಂತ್ರಿಗಳ ತೀರ್ಮಾನ ಅದನ್ನು ನಾನು ಹೇಳಲು ಆಗುವುದಿಲ್ಲ ಎಂದರು.
ಸಂಪುಟ ವಿಸ್ತರಣೆವೇಳೆ ಯಾರಿಗೆ ಅವಕಾಶ ಎನ್ನುವ ಬಗ್ಗೆ ಸ್ವಾಭಾವಿಕವಾಗಿ ಸಮಾಲೋಚನೆಗಳು, ಚರ್ಚೆಗಳು ನಡೆಯುತ್ತವೆ ಅದನ್ನು ಇಲ್ಲಿ ಹೇಳಲಾಗುವುದಿಲ್ಲ ಎಂದರು.
ಬಿಹಾರದಲ್ಲಿ ನಾಲ್ಕನೇ ಬಾರಿಗೆ ಜನಮನ್ನಣೆ ಗಳಿಸುವುದು ಅಷ್ಟು ಸುಲಭವಲ್ಲ. ನಿತೀಶ್ ಕುಮಾರ್ ಸರ್ಕಾರ ಅದನ್ನು ಸಾಧಿಸಿದೆ. ಪ್ರಧಾನಿ ಹಾಗೂ ನಿತೀಶ್ ಕುಮಾರ್ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದಿದೆ. ಬಿಹಾರ ಜನರ ಕನಸನ್ನು ನನಸು ಮಾಡಲು ಶಕ್ತಿ ತುಂಬುವಂತಹ ಕೆಲಸವನ್ನು ಎನ್.ಡಿ.ಎ ಮಾಡುತ್ತದೆ ಎಂದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಜೊತೆಗೆ ಮೂರು ರಾಜ್ಯಗಳ ಉಸ್ತುವಾರಿ ಹೊಣೆಯನ್ನು ಪಕ್ಷ ವಹಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷ ಕೊಡುವ ಜವಾಬ್ದಾರಿಗೆ ಜೀವ ತುಂಬುವ ಕೆಲಸ ಮಾಡುತ್ತೇನೆ ಎಂದರು.
500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಸಂಭ್ರಮ ನೆಲೆಸಿದೆ. ಯೋಗಿ ಆದಿತ್ಯಾನಾಥ ನೇತೃತ್ವದ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ. ಜಗತ್ತಿನ ಜನ ಸಂಭ್ರಮಿಸಿದ್ದಾರೆ. ಇದೊಂದು ಶುಭ ಸಂಕೇತ. ಆಯೋಧ್ಯೆಯಲ್ಲಿ ಮತ್ತೆ ವೈಭವ ಮರುಕಳಿಸಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss