Wednesday, June 29, 2022

Latest Posts

ದುಡಿಮೆ ಮಾಡಿದರೆ ರೋಗಗಳು ದೂರವಾಗಿ ಆರೋಗ್ಯ ಪ್ರಾಪ್ತಿ, ಆರ್ಥಿಕ ಸದೃಢ: ಡಾ. ವೀರೇಂದ್ರ ಹೆಗಡೆ

ಹೊಸ ದಿಗಂತ ವರದಿ, ತುಮಕೂರು:

ಪ್ರತಿಯೊಬ್ಬ ಮನುಷ್ಯ ದುಡಿಮೆ ಮಾ‌‌ಡಬೇಕು. ದುಡಿಮೆ ಮಾಡಿದರೆ ರೋಗಗಳು ದೂರವಾಗಿ ಆರೋಗ್ಯ ಪ್ರಾಪ್ತಿಯಾಗುವು
ದರ ಜತೆಗೆ ಆರ್ಥಿಕವಾಗಿಯೂ ಸದೃಢರಾಗುತ್ತೇವೆ. ಹಾಗಾಗಿ ಬದುಕಿನಲ್ಲಿ ದುಡಿಮೆಯೇ ಶ್ರೇಷ್ಠ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿ ‌ಡಾ. ವೀರೇಂದ್ರ ಹೆಗಡೆ ಹೇಳಿದರು.

ದುಡಿಮೆ ಮಾಡದವರಿಗೆ ದೇವರು ಸಹ ಒಲಿಯುವುದಿಲ್ಲ
ಯಾರು ದುಡಿಮೆ ಮಾಡುವುದಿಲ್ಲವೋ ಅಂತಹವರಿಗೆ ರೋಗ ಬರುವುದರ ಜತೆಗೆ ಆರ್ಥಿಕ ಸಂಕಷ್ಟವೂ ಎದುರಾಗುತ್ತದೆ.
ದುಡಿಮೆ ಮಾಡದವರಿಗೆ ದೇವರು ಸಹ ಒಲಿಯುವುದಿಲ್ಲ. ದೇವರಿಗೆ ದುಡಿಮೆ ಮಾಡುವವರೇ ಪ್ರಿಯ. ಆದ್ದರಿಂದ ಪ್ರತಿಯೊಬ್ಬರೂ ದುಡಿಮೆ
ಮಾಡುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು.
ನಗರದ ಕುಂಚಿಟಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ
5 ತಾಲ್ಲೂಕಿನ ಕಾರ್ಯಕರ್ತರು ಹಾಗೂ ಸೇವಾ ಪ್ರತಿನಿಧಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರುಗಳಿಗೆ ಆಟೋರಿಕ್ಷಾ ವಾಹನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾರ್ಥಿಸಿದರೆ ಏನೂ ಪ್ರಯೋಜನವಿಲ್ಲ
ದುಡಿಮೆ ಮಾಡದೆ ಕೇವಲ ದೇವರನ್ನು ನನಗೆ ಎಲ್ಲವೂ ಕೊಡು ಎಂದು ಪ್ರಾರ್ಥಿಸಿದರೆ ಏನೂ ಪ್ರಯೋಜನವಿಲ್ಲ. ಶ್ರಮಪಟ್ಟು
ಕೃಷಿ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳನ್ನು ಮಾಡಬೇಕ ಎಂದರು.
ಸ್ವಯಂ ವ್ಯಕ್ತಿತ್ವ ಬೆಳೆಸುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೂಲ ಉದ್ದೇಶವಾಗಿದೆ. ಗ್ರಾಮಾಭಿವೃದ್ಧಿ ಯೋಜನೆ ಎನ್ನುವ ಕಾರ್ಯಕ್ರಮ ಜನರೊಂದಿಗೆ ಹೊಂದಿಕೊಂಡಿರುವ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೇವಾ ಕಾರ್ಯಕ್ರಮ. ಯೋಜನೆಯ ಕಾರ್ಯಕರ್ತರು ಕೊರೊನಾ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸಿದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೊರೊನಾ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಿಗೆ ಕಡಿತ ಇಲ್ಲದೆ ವೇತನ ನೀಡಲಾಗಿದೆ ಎಂದ ಅವರು, ಕೊರೊನಾ ಸಂದರ್ಭದಲ್ಲಿ ಅಗತ್ಯ ಇರುವವರಿಗೆ ಹಣಕಾಸಿನ ನೆರವನ್ನು ಒದಗಿಸಲಾಯಿತು. ಸಾಲ ಕಟ್ಟಲು ಅಸಾಧ್ಯವಾದವರಿಗೂ ಸಾಕಷ್ಟು ಕಾಲಾವಕಾಶವನ್ನು ನೀಡಲಾಯಿತು. ಇದರಿಂದಾಗಿ ಇಂದು ಅನೇಕ ಮಂದಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ ಎಂದರು.
ಯೋಜನೆಯ ಪ್ರತಿ ಕೆಲಸಗಳ ಹಿಂದೆ ಮಾನವೀಯ ಮೌಲ್ಯಗಳು ಅಡಗಿವೆ. ಯೋಜನೆಯ ಕಾರ್ಯಕರ್ತರು, ಫಲಾನುಭವಿಗಳು ಮಾನವೀಯ ಮೌಲ್ಯಗಳೊಂದಿಗೆ ವ್ಯವಹರಿಸಿದ್ದಲ್ಲಿ ಸಾಮರಸ್ಯದ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಯೋಜನೆಯ ಸದಸ್ಯರ ಅದೃಷ್ಟವನ್ನು ಬದಲಾಯಿಸುವ, ಅವರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಶ್ರೀ ಮಂಜುನಾಥಸ್ವಾಮಿ ನಮಗೆ ನೀಡಿದ್ದಾರೆ ಎಂದರು.
ಸಂಸ್ಥೆಯ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರು ದೇವರು ಇದ್ದಂತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಕಾರ್ಯಕರ್ತರುಗಳು ಸ್ವಾರ್ಥ ಇಲ್ಲದೆ, ವೈಯಕ್ತಿಕ ಲಾಭ ಪಡೆಯುವ ಭಾವನೆ ಹೊಂದದೆ ಉತ್ತಮವಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಈ ಮೂಲಕ ಜನರ ಗೌರವ, ಪ್ರೀತಿ ಉಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕೋವಿಡ್ ಸಂಕಷ್ಟದ ಸಮಯದಲ್ಲೂ ಈ ವರ್ಷ 1350 ಗುಂಪುಗಳು ರಚನೆಯಾಗಿವೆ. ಈಗಿರುವ ಸ್ವಸಹಾಯ ಗುಂಪುಗಳಿಂಗ 50.05 ಕೋಟಿ ರೂ. ಉಳಿತಾಯ ಮಾಡಲಾಗಿದೆ. 227 ಕೋಟಿ ರೂ. ಪ್ರಗತಿ ನಿಧಿ ಮೊತ್ತ ಸಂಗ್ರಹವಾಗಿದೆ ಎಂದ ಅವರು, 10 ಕೋಟಿ ರೂ. ವೆಚ್ಚದಲ್ಲಿ 80 ಕೆರೆಗಳ ಅಭಿವೃದ್ಧಿ ಮಾಡಲಾಗಿದೆ ಎಂದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ. ವೀರೇಂದ್ರ ಹೆಗಡೆಯವರು ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರುಗಳಿಗೆ ಆಟೋರಿಕ್ಷಾ ವಾಹನಗಳ ವಿತರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss