ಹೊಸದಿಗಂತ ವರದಿ, ಹಾವೇರಿ (ಬ್ಯಾಡಗಿ):
ಪಟ್ಟಣದ ಬೀದಿ ಬದಿಗಳಲ್ಲಿ ಮಾಂಸ ಮಾರಾಟ ಮಾಡುತ್ತಿರುವುದರಿಂದ ಗಲೀಜು ಮತ್ತು ದುರ್ವಾಸನೆ ಬೀರುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ರಾಜ್ಯ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕದ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಆರೋಪಿಸಿದ್ದಾರೆ.
ಈ ಕುರಿತು ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿರುವ ಅವರು, ಹಲವಾರು ತಿಂಗಳುಗಳಿಂದ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬೀದಿ ಬದಿಗಳಲ್ಲಿ ಕುರಿ ಮತ್ತು ಕೋಳಿ ಮಾಂಸದ ಮಾರಾಟಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ, ಪುರಸಭೆ ಮುಖ್ಯಾಧಿಕಾರಿ ಹಾಗೂ ತಾಲೂಕಿನ ಆರೋಗ್ಯಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ಬೀದಿ ಬದಿಗಳಲ್ಲಿ ಎಲ್ಲೆಂದರಲ್ಲಿ ಕುರಿ ಮತ್ತು ಕೋಳಿ ಮಾಂಸದ ಮಾರಾಟ ಮಾಡಲು ಅವಕಾಶವಿಲ್ಲ. ಬೀದಿ ಬದಿಗಳಲ್ಲಿ ಕುರಿ ಮತ್ತು ಕೋಳಿ ಮಾಂಸದ ಮಾರಾಟ ಮಾಡುವುದರಿಂದ ಹಂದಿ, ನಾಯಿಗಳ ಕಾಟವೂ ಹೆಚ್ಚಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗಬಾರದೆಂಬ ಉದ್ದೇಶದಿಂದ ಸ್ವಚ್ಛತೆಯನ್ನು ಕಾಪಾಡಿಕೊಂಡು ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾಂಸ ಮಾರಾಟ ಮಾಡುವಂತೆ ಮಾಂಸ ಮಾರಾಟಗಾರರಿಗೆ ತಿಳಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮಲ್ಲೇಶಪ್ಪ ಅವರು ಆಗ್ರಹಿಸಿದ್ದಾರೆ.