ಹೊಸ ದಿಗಂತ ವರದಿ, ಮೈಸೂರು:
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಚಿತ್ರ ನಟ ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಖಂಡಿಸಿ ಅರಮನೆ ನಗರಿ ಮೈಸೂರಿನಲ್ಲಿ ಶನಿವಾರ ಡಾ. ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ನಗರದ ಜಗನ್ಮೋಹನ ಅರಮನೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ, ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರ ನಟ ಡಾ.ವಿಷ್ಣುವರ್ಧನ್ ವಿಚಾರದಲ್ಲಿ ನೋವುಂಟು ಮಾಡುತ್ತಿರುವುದು ಸರಿಯಲ್ಲ. ಆ ಜಾಗದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಬೇಡವಾಗಿದ್ದರೆ, ಅದನ್ನು ಬೇರೆ ಕಡೆ ಸ್ಥಳಾಂತರಿಸಬಹುದಿತ್ತು, ಆದರೆ ಅದರ ಬದಲಾಗಿ ಪುತ್ಥಳಿಯನ್ನೇ ಧ್ವಂಸ ಮಾಡುವ ಹೀನಾ ಕೃತ್ಯ ಎಸಗಬಾರದಿತ್ತು ಎಂದು ಪ್ರತಿಭಟನಾಕಾರರು ತೀವ್ರ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಪೊಲೀಸ್ ಇಲಾಖೆ ಡಾ.ವಿಷ್ಣುವರ್ಧನ್ರ ಪುತ್ಥಳಿಗಳಿಗೆ ಭದ್ರತೆ ಕೊಡಬೇಕು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಷ್ಣು ಅವರ ಅಭಿಮಾನಿಗಳಿಗೆ ಮತ್ತೆ ಮತ್ತೆ ನೋವಾಗುವ ಸಂಗತಿಗಳು ನಡೆಯುತ್ತಲೇ ಇವೆ. ಮುಂದಿನ ದಿನಗಳಲ್ಲದರೂ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು, ಪುತ್ಥಳಿ ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.