ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ತಾಪಮಾನದಲ್ಲಿ ಏರಿಳಿತವಾಗುತ್ತಿದ್ದು, ಶುಕ್ರವಾರ ಕನಿಷ್ಠ 7.5 ಡಿಗ್ರಿ ಉಷ್ಣಾಂಶ ದಾಖಲಿಸಿದೆ. ಇದು ಕಳೆದ 14 ವರ್ಷಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನವಾಗಿದೆ ಎಂದು ಭಾರತದ ಹವಾಮಾನ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.
ದೆಹಲಿಯಲ್ಲಿ ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇರುವುದರಿಂದ ಮೈ ಕೊರೆಯುವ ಚಳಿ ಉಂಟಾಗುತ್ತಿದೆ ಎಂದು ಸ್ಕೈಮೇಟ್ ನ ತಜ್ಞ ಮಹೇಶ್ ಪಲಾವತ್ ತಿಳಿಸಿದ್ದಾರೆ.
ಪಶ್ಚಿಮ ಹಿಮಾಲಯದ ಕಡೆಯಲ್ಲಿ ಅಧಿಕ ಪ್ರಮಾಣದ ಹಿಮವಿದ್ದು, ಇದರಿಂದ ಇತ್ತ ಕಡೆ ತಂಪಾದ ಗಾಳಿ ಬೀಸುತ್ತಿರುವ ಕಾರಣ ತಾಪಮಾನ ಕಡಿಮೆಯಾಗಿ ಚಳಿ ಹೆಚ್ಚಾಗಿದೆ ಹಾಗೂ ಶನಿವಾರದವರೆಗೆ ಇದೇ ರೀತಿಯ ಪರಿಸ್ಥಿತಿ ಮುಂದುವರಿಯಲಿದೆ ಎಂದು ಪಲಾವತ್ ಹೇಳಿದ್ದಾರೆ.
ಇನ್ನು ನವೆಂಬರ್ 23 ರಂದು ವಾಯುವ್ಯದ ಕಡೆಯಿಂದ ಮತ್ತೊಂದು ಸಮಸ್ಯೆ ಎದುರಾಗಲಿದ್ದು, ಈ ಕಡೆ ಮತ್ತಷ್ಟು ಕನಿಷ್ಠ ತಾಪಮಾನ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಕಳೆದ ವರ್ಷ ಕನಿಷ್ಠ 11.5 ಡಿಗ್ರಿ ಸೆಲ್ಸಿಯಸ್, 2018 ರಲ್ಲಿ 10.5 ಡಿಗ್ರಿ ಸೆಲ್ಸಿಯಸ್ ಮತ್ತು 2017 ರ ನವೆಂಬರ್ ತಿಂಗಳಲ್ಲಿ 7.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಗುರುವಾರ, ದೆಹಲಿ ನಗರದಲ್ಲಿ ಕನಿಷ್ಠ 9.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.