ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಉನ್ನತ ಜವಾಬ್ದಾರಿ ವಹಿಸಿಕೊಂಡಿರುವ ಸಿ.ಟಿ.ರವಿ ಅವರು ಶುಕ್ರವಾರ ದೆಹಲಿಯಲ್ಲಿ ತಮ್ಮ ಅಧಿಕೃತ ಕಚೇರಿಯನ್ನು ಆರಂಭಿಸಿದ್ದಾರೆ. ಈ ವೇಳೆ ಕಾಫಿ ನಾಡಿನಿಂದ ದೆಹಲಿ ವರೆಗೆ ನಡೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ನೆನಪಿಸಿಕೊಂಡಿರುವ ಅವರು, ಈ ಸಂಬಂಧ ಭಾವುಕರಾಗಿ ಬರೆದ ಪತ್ರಕ್ಕೆ ಮೊದಲ ಸಹಿ ಹಾಕಿದ್ದಾರೆ.
ಚಿಕ್ಕಮಾಗರವಳ್ಳಿಯ ಸಾಮಾನ್ಯ ರೈತ ಕುಟುಂಬದ ಮಗನೊಬ್ಬ ಇಂದು ದೇಶದ ರಾಜಧಾನಿ ನವದೆಹಲಿಯಲ್ಲಿನ ಬಿಜೆಪಿ ಕಛೇರಿಯಲ್ಲಿ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಂತಿದ್ದಾನೆ. ಕರ್ನಾಟಕದ ಹಳ್ಳಿಯಿಂದ ಆರಂಭವಾದ ರಾಜಕೀಯ ಯಾತ್ರೆ ಇಂದು ದಿಲ್ಲಿಯವರೆಗೂ ಬಂದು ನಿಂತಿದೆ.
1988 ರಲ್ಲಿ ಆಟೋ ಚಂದ್ರಣ್ಣನವರು ಬಿಜೆಪಿ ಸದಸ್ಯನಾಗಲು ಆಹ್ವಾನಿಸಿ ಬಿಜೆಪಿ ಸದಸ್ಯನಾಗಿ ಮಾಡಿದರು. ಅಲ್ಲಿಂದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗುವವರೆಗೆ ನನ್ನನ್ನು ಬೆಳೆಸಿದವರು ಇಂತಹುದೇ ಅನೇಕ ಚಂದ್ರಣ್ಣರು, ಪ್ರಚಾರ ಮುಗಿಸಿ ಹಸಿದು ಬಾಗಿಲ ಬಳಿ ನಿಂತಾಗ ಅಕ್ಕರೆಯಿಂದ ತುತ್ತು ಕೊಟ್ಟರು. ಖಾಲಿ ಜೇಬಿನಲ್ಲಿ ಹೋರಾಟಗಳನ್ನು ಪ್ರಾರಂಭಿಸಿದಾಗ ಖರ್ಚಿಗೆ ಹಣ ಕೊಟ್ಟರು. ನನ್ನ ತಪ್ಪುಗಳನ್ನು ತಿದ್ದಿ ಕಿವಿ ಹಿಂಡಿದರು. ರಾಜಕೀಯ ಸರಿ ತಪ್ಪುಗಳನು ಹೇಳಿಕೊಟ್ಟರು ಎಂದು ಸಿ.ಟಿ.ರವಿ ಹೇಳಿಕೊಂಡಿದ್ದಾರೆ.
ಹೀಗೆ 33 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಬೀದಿಗಳಲ್ಲಿ ಪಕ್ಷದ ಬ್ಯಾನರ್ ಕಟ್ಟುವ ಮೂಲಕ ಆರಂಭವಾದ ನನ್ನ ರಾಜಕೀಯ ಜೀವನ ಇಂದು ಇಲ್ಲಿವರೆಗೂ ಬಂದಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ನನ್ನೂರು ಚಿಕ್ಕಮಗಳೂರು ಜನತೆ. ಹೆತ್ತೊಡಲ ಮಗನಂತೆ ನನ್ನನ್ನು ಪೋಷಿಸಿ ದೊಡ್ಡ ಮಟ್ಟಕ್ಕೆ ಬೆಳೆಸಿ ನಿಲ್ಲಿಸಿದ್ದೀರಿ ನಿಮ್ಮ ಪ್ರೀತಿ, ಅಭಿಮಾನದ ಋಣ ದೊಡ್ಡದು ಎಂದಿದ್ದಾರೆ.
ಇವತ್ತು ದೆಹಲಿಯಲ್ಲಿ ಹೊಸ ರಾಜಕೀಯ ಯಾನವೊಂದು ಆರಂಭವಾಗುತ್ತಿರುವ ಸಂದರ್ಭದಲ್ಲಿ ಹಳೆಯ ನೆನಪಿನ ಹಾಯಿದೋಣಿಗಳು ನನ್ನ ಭಾವ ಕಡಲಿನಲಿ ತೇಲಿ ಹೋಗುತ್ತಿವೆ. ಹೃದಯ ತುಂಬಿ ಬಂದಿದೆ. ನಿಮಗೆ ಸದಾ ಅಭಾರಿ ನಿಮ್ಮ ಪ್ರೀತಿಯ ಋಣ ನನ್ನ ಮೇಲಿದ್ದು ಜೀವವಿರುವ ತನಕ ನಿಮ್ಮೆಲ್ಲರ ಮಗನಂತೆ ಸೇವೆ ಮಾಡುವ ಭಾಗ್ಯ ನನ್ನದಾಗಿರಲಿ ಎಂದು ಕೇಳಿಕೊಂಡಿದ್ದಾರೆ.