ಹೊಸದಿಲ್ಲಿ: ದೆಹಲಿಯಲ್ಲಿ ಯಾವುದೇ ಬೃಹತ್ ಸಮಾವೇಶಗಳು, ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಭೆ ಸಮಾರಂಭಗಳನ್ನ ಸೆಪ್ಟೆಂಬರ್ 30ರವರೆಗೆ ನಡೆಸುವಂತಿಲ್ಲ ಎಂದು ಡಿಡಿಎಂಎ ಸ್ಪಷ್ಟಪಡಿಸಿದೆ.
ನಗರದಲ್ಲಿ ಕೃಷಿ ವಿಧೇಯಕಗಳ ವಿರುದ್ಧ ಹಲವಾರು ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ಹಿಂದೆ ನೀಡಿರುವ ಆದೇಶವನ್ನು ಉಲ್ಲೇಖಿಸಿ, ಸೆಪ್ಟೆಂಬರ್ 30ರವರೆಗೆ ಪ್ರತಿಭಟನೆಗಳಿಗೆ ಅವಕಾಶ ನೀಡಬಾರದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ದೆಹಲಿ ಸರ್ಕಾರದ ಉಪ ಗೃಹ ಕಾರ್ಯದರ್ಶಿಗೆ ಸೋಮವಾರ ನೀಡಿದ ಮಾಹಿತಿಯಲ್ಲಿ ಡಿಡಿಎಂಎ ಹೆಚ್ಚುವರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಗೋಯಲ್ ಅವರು, ಪ್ರಾಧಿಕಾರದ ಆದೇಶವು ಸೆಪ್ಟೆಂಬರ್ 30ರವರೆಗೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಜೂನ್ 6ರಂದು ಡಿಡಿಎಂಎ ಆದೇಶದ ಪ್ರಕಾರ, ಎಲ್ಲಾ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಸಮಾರಂಭಗಳು ಮತ್ತು ಇತರ ಸಭೆ ಸಮಾರಂಭಗಳನ್ನ ದೆಹಲಿಯ ಎನ್ ಜಿಟಿಯಾದ್ಯಂತ ನಿಷೇಧಿಸಲಾಗಿದೆ.
‘ಆದ್ದರಿಂದ ಪ್ರಸ್ತುತ, ಎಲ್ಲಾ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಸಮಾರಂಭಗಳು, ಇತರ ಸಭೆಗಳು ಮತ್ತು ಸಭೆ ಸಮಾರಂಭಗಳನ್ನು ದೆಹಲಿಯಾದ್ಯಂತ ನಿಷೇಧಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ’ ಎಂದು ಅವರು ತಿಳಿಸಿದ್ದಾರೆ.