Monday, July 4, 2022

Latest Posts

ದೆಹಲಿಯ ರೈತ ಹೊರಾಟಕ್ಕೆ ಬೆಂಬಲಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಪಾದಯಾತ್ರೆ

ಹೊಸದಿಗಂತ ವರದಿ,ಚಿತ್ರದುರ್ಗ:

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಚ್ಚೇ ದಿನ್ ಆಯೇಗಾ ಎಂದು ಹೇಳುತ್ತಲೇ ಬರುತ್ತಿದೆ. ಆದರೆ ಅಂಬಾನಿ, ಅದಾನಿಯಂತ ಶ್ರೀಮಂತರಿಗೆ ಮಾತ್ರ ಅಚ್ಚೇ ದಿನ್ ಬಂದಿದೆ. ಬಡವರಿಗೆ ಬರಲಿಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು.
ಎಪಿಎಂಸಿ ಕಾಯಿದೆ ಸೇರಿದಂತೆ ಮೂರು ಕಾಯ್ದೆಗಳನ್ನು ಹಿಂಪಡೆಯುವಂತೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಜಿಲ್ಲಾ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ೭೦ ದಿನಗಳಿಂದ ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಕಿವಿ ಕೇಳದಂತೆ ವರ್ತಿಸುತ್ತಿದೆ. ಸುಪ್ರೀಂಕೋರ್ಟ್ ಈ ಕಾಯಿದೆಗಳಿಗೆ ತಾತ್ಕಾಲಿಕವಾಗಿ ತಡೆ ಹಿಡಿದಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ರೈತ ವಿರೋಧಿ ಕಾಯಿದೆಗಳನ್ನು ಹಿಂಪಡೆಯದೆ ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ದೂರಿದರು.
ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿದ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಆದರೆ ಕಾಂಗ್ರೆಸ್ ದೇಶಕ್ಕಾಗಿ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಾರೆ. ಸ್ವಾತಂತ್ರದ ಸಮಯದಲ್ಲಿ ಬಿಜೆಪಿ ಇರಲಿಲ್ಲ ಎಂಬುದನ್ನು ಅವರು ತಿಳಿಯಬೇಕಿದೆ ಎಂದು ಹೇಳಿದರು.
ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಿದೆ. ಅದರಿಂದ ರೈತರಿಗೆ ಸಂಕಷ್ಟ ಪ್ರಾರಂಭವಾಗಿದೆ. ದೇಶದ ಶೇ. ೫೦ ರಷ್ಟು ಜನ ಗೋಮಾಂಸ ಸೇವನೆ ಮಾಡುತ್ತಾರೆ. ಇದರಷ್ಟು ಕಡಿಮೆ ಬೆಲೆಗೆ ಬೇರೆ ಮಾಂಸ ಸಿಗುವುದಿಲ್ಲ. ಗೋಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಿರುವ ಸರ್ಕಾರ, ಅದರ ಮಾಂಸಕ್ಕೆ ಪರ್ಯಾಯವಾಗಿ ಏನೂ ನೀಡಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರದ ಮೂರು ಕಾಯಿದೆಗಳಿಂದ ಆಗುವ ಅನಾಹುತಗಳನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕಿದೆ. ವಿದ್ಯುತ್ ಖಾಸಗೀಕರಣ ಮಾಡುವುದರಿಂದ ರೈತರು ಹಣ ಕೊಟ್ಟು ವಿದ್ಯುತ್ ಖರೀದಿ ಮಾಡಬೇಕಾಗುತ್ತದೆ. ಇದು ಕೃಷಿಕರನ್ನು ಸಂಕಷ್ಟಕ್ಕೆ ದೂಡುತ್ತದೆ ಎಂದರು.
ಬಿಜೆಪಿ ನಾಯಕರು ಇದನ್ನು ಅಲ್ಲಗಳೆಯುತ್ತಾರೆ. ಹಾಗಾಗಿ ಬಿಜೆಪಿ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಕಾಯ್ದೆ ಬೆಂಬಲಿಗರು ಅಳವಡಿಸಿಕೊಳ್ಳಲಿ. ಸರಿ ಇದ್ದರೆ ಆಮೇಲೆ ನಾವು ಅಳವಡಿಸಿಕೊಳ್ಳುತ್ತೇವೆ. ಖರೀದಿ ಮಾಡುವುದು ಇದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಹೇಳಿ ಕಾಯ್ದೆಯನ್ನು ತೆಗೆಯುವಂತೆ ಆಗ್ರಹಿಸಲಿ ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಶಾಸಕ ಎ.ವಿ.ಉಮಾಪತಿ, ಕಾರ್ಯಾಧ್ಯಕ್ಷ ಹಾಲೇಶ್, ಜಿ.ಪಂ. ಸದಸ್ಯ ನರಸಿಂಹರಾಜು, ಮುಖಂಡರುಗಳಾದ ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಉಲ್ಲಾಸ್, ಎನ್.ಡಿ.ಕುಮಾರ್, ಅಜ್ಜಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss