Monday, June 27, 2022

Latest Posts

ದೆಹಲಿ ದಂಗೆಯ ಹಿಂದಿನ ಉದ್ದೇಶವೇನು?

-ನರೇಂದ್ರ ಎಸ್. ಗಂಗೊಳ್ಳಿ

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಇತ್ತೀಚೆಗೆ ನೋ ಸಿಎಎ, ನೊ ಎನ್‌ಆರ್‌ಸಿ, ನೋ ಎನ್‌ಪಿಆರ್ ಎನ್ನುವ ಘೋಷಣೆಗಳೊಂದಿಗೆ ಜಾಹೀರಾತು ನೀಡಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿದ ಆರೋಪದಲ್ಲಿ ಅಲ್ಲಿನ ರಾಜ್ಯಪಾಲ ಜಗದೀಪ್ ಧನಕರ್ ಆ ಬಗೆಗೆ ಸಂಪೂರ್ಣ ಮಾಹಿತಿ ನೀಡುವಂತೆ ಸರ್ಕಾರದ ಸಂಬಂಧಿತ ಖಾತೆಗೆ ಪತ್ರ ಬರೆದಿದ್ದಾರೆ ಎನ್ನುವುದು ಸುದ್ದಿ.  ನೋ ಸಿಎಎ, ನೊ ಎನ್‌ಆರ್‌ಸಿ ಹೆಸರಿನ ಬ್ಯಾನರುಗಳಲ್ಲಿ ತನ್ನದೇ ಚಿತ್ರ ಹಾಕಿಕೊಂಡು ಕಂಡಕಂಡಲ್ಲಿ ಭಾಷಣ ಮಾಡುತ್ತಾ ಮಹಾನ್ ನೇತಾರಳಂತೆ ಪೋಸು ಕೊಡುವ ಮಮತಾಗೆ ಒಂದು ದೇಶ ಸಂವಿಧಾನ ಬದ್ಧವಾಗಿಯೇ ಜಾರಿಗೆ ತಂದಿರುವ ಕಾಯಿದೆಗಳನ್ನು ಈ ರೀತಿ ವಿರೋಧಿಸಬಾರದು ಎನ್ನುವ ಕಾಮನ್‌ ಸೆನ್ಸ್ ಕೂಡ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಇಂತವರನ್ನೆಲ್ಲಾ ಒಂದು ರಾಜ್ಯ ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳಬೇಕಾ? ಇಂತಹ ಜನರಿಂದಲೇ ತಾನೇ ಜನ ದಾರಿ ತಪ್ಪುತ್ತಿರುವುದು!

ಯಾರೇ ಆಗಲಿ ಪ್ರಶ್ನೆ ಮಾಡುವುದು ತಪ್ಪಲ್ಲ. ವಿರೋಧಿಸುವುದು ತಪ್ಪಲ್ಲ. ಆದರೆ ಒಂದು ವಿಚಾರದ ಬಗೆಗೆ ಅದನ್ನು ಪೂರ್ತಿಯಾಗಿ ಅರಿತುಕೊಳ್ಳದೆ ಒಂದೇಟಿಗೆ ವಿರೋಧಿಸುವುದು ಖಂಡಿತಾ ತಪ್ಪು. ಅದಕ್ಕಿಂತ ಹೆಚ್ಚಾಗಿ ಜನರನ್ನು ಒಟ್ಟು ಸೇರಿಸಿ  ಇಲ್ಲಸಲ್ಲದ ವಿಚಾರಗಳನ್ನು ಹೇಳಿ ದಾರಿ ತಪ್ಪಿಸಿ ಸರ್ಕಾರದ ವಿರುದ್ಧ ಎತ್ತಿಕಟ್ಟಿ ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ, ಜನಮನಗಳನ್ನು ಒಡೆಯುವ ಜನರನ್ನು ಮೊದಲು ಪ್ರಶ್ನಿಸಿ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕಿದೆ. ಈ ಕಾಯ್ದೆಗಳ ವಿಚಾರದಲ್ಲಿಯೂ ಕೂಡ ಸಾಮಾನ್ಯ ಜನ ಹಿಂದೆ ಮುಂದೆ ಯೋಚಿಸದೆ ವಿಚಾರಗಳನ್ನು ಪರಾಮರ್ಶಿಸದೆ ಯಾರೋ ಹೇಳಿದ್ದನ್ನೇ ಸತ್ಯವೆಂದು ನಂಬಿಕೊಂಡಿದ್ದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿರುವಂತಾದ್ದು.

ಈಶಾನ್ಯ ದೆಹಲಿಯಲ್ಲಿ ಈ ಹಿಂದಿನ ಭಾನುವಾರ ಸಿಎಎ ವಿರೋಧಿಸಿ ಮೌಜ್‌ಪುರ್ ಚೌಕ್‌ನಲ್ಲಿ ಚಂದ್ರಶೇಖರ್ ಆಜಾದ್ ನೇತೃತ್ವದ ಭೀಮ್ ಆರ್ಮಿ ಸಂಘಟನೆಯ ಬೆಂಬಲಿಗರೊಬ್ಬರು ಸಿಎಎ ಪರ ಘೋಷಣೆ ಕೂಗುತ್ತಿದ್ದ ಗುಂಪಿನ ಮೇಲೆ ಕಲ್ಲು ಎಸೆದಾಗ, ಆ ಗುಂಪು ಇವರನ್ನು ಅಟ್ಟಾಡಿಸಿಕೊಂಡು ಹೋಗಿತ್ತು.  ಅದೇ ದಿನ ಸಂಜೆ ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ ಹಿಮಾಂಶು ವಾಲ್ಮೀಕಿ ಮತ್ತಷ್ಟು ಜನರನ್ನು ಸೇರಿಸಿಕೊಂಡು ಬೀದಿ ಕಾಳಗಕ್ಕೆ ಸಜ್ಜುಗೊಳಿಸಿದ್ದರು. ಅದೊಂದು ಪ್ರಚೋದನೆಯೇ ನಂತರದ ದಿನಗಳಲ್ಲಿ ನಡೆದ ಎಲ್ಲಾ ಅನಾಹುತಗಳಿಗೆ ಕಾರಣವಾಯಿತು ಎಂದು ಪೋಲಿಸ್ ಮೂಲಗಳ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ವಿಚಾರಗಳೇನೇ ಇದ್ದರೂ ಪ್ರತಿಭಟನೆ ನಿರತರು ಇನ್ನೊಂದು ಗುಂಪಿನ ಮೇಲೆ ಕಲ್ಲು ಎಸೆಯುವ ಅವಶ್ಯಕತೆ ಏನಿತ್ತು? ವಿರೋಧಿಸಲು ನಿಮಗೆ ಹಕ್ಕು ಇದೆ ಎಂದಾದಲ್ಲಿ ಪರ ವಹಿಸಿ ಪ್ರತಿಭಟಿಸಲು ಕೂಡ ಇಲ್ಲಿನ ನಾಗರಿಕನಿಗೆ ಹಕ್ಕು ಇದೆಯಲ್ಲವೆ? ಅಷ್ಟೂ ದಿನ ಇಲ್ಲದ ಈ ಪರಿ ಅಹಿಂಸಾತ್ಮಕವಾದ ದಂಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ಕೊಡುವ ಸಂದರ್ಭದಲ್ಲೇ ನಡೆದಿದ್ದು ನೋಡಿದರೆ ಇದರ ಹಿಂದೆ ಭಾರತದ ಮಾನವನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕುವ ಹುನ್ನಾರ ಇದ್ದಿದ್ದು ಸತ್ಯ ಎನ್ನುವುದು ಎಂಥಹ ದಡ್ಡನಿಗಾದರೂ ಅರ್ಥವಾಗುವ ಸಂಗತಿ. ಮೋದಿಯಂತಹ ಅಪ್ರತಿಮ ನಾಯಕನನ್ನು, ಮತ್ತವರ ಸರ್ಕಾರವನ್ನು ಕೆಳಗಿಳಿಸಬೇಕು ಎಂದು ಕಾಯುತ್ತಿರುವ ಅದೆಷ್ಟೋ ವಿದ್ರೋಹಿಗಳು ಈ ದಂಗೆಗೆ ಸಾಥ್ ನೀಡಿದ್ದು ವಾಸ್ತವ. ಈ ಪ್ರಮಾಣದಲ್ಲಿ ದಂಗೆಯ ಮುನ್ಸೂಚನೆಗಳು ಲಭಿಸಿದರೂ ಪೊಲೀಸ್ ವ್ಯವಸ್ಥೆ ಅದನ್ನು ಸರಿಯಾಗಿ ನಿರ್ವಹಿಸುವಲ್ಲಿ ಸೋತದ್ದರ ಹಿಂದೆ ಅದ್ಯಾರ ಕೈವಾಡ ಇತ್ತು ಎನ್ನುವುದನ್ನು ಬಯಲಿಗೆಳೆಯಬೇಕಿದೆ. ಯಾಕೆಂದರೆ ನಮ್ಮ ಪೋಲಿಸ್ ವ್ಯವಸ್ಥೆಯಾಗಲಿ ಅಥವಾ ಬೇಹುಗಾರಿಕಾ ವ್ಯವಸ್ಥೆಯಾಗಲಿ ದುರ್ಬಲವಲ್ಲವೇ ಅಲ್ಲ. ಗನ್ ಹಿಡಿದುಕೊಂಡು ಶೂಟ್ ಮಾಡುವಂತಹ ಪಾತಕಿಗಳೆದುರು ನಮ್ಮ ಪೋಲಿಸ್ ಲಾಠಿ ಹಿಡಿದು ಎದುರಿಸುವ ದೃಶ್ಯ ನಿಜಕ್ಕೂ ಚಿಂತಿಸುವಂತೆ ಮಾಡಿವೆ.

ಈಶಾನ್ಯ ದೆಹಲಿಯ ನಗರಗಳಲ್ಲಿ ನಡೆದ ಈ ದಂಗೆ ಪಕ್ಕಾ ಪ್ರಾಯೋಜಿತ ಮತ್ತು ಆಯೋಜಿತ ದಂಗೆಯಾಗಿತ್ತು ಎನ್ನುವುದು ಕಣ್ಣೆದುರಿಗೆ ಕಾಣುತ್ತಿರುವ ಅಂಶಗಳಿಂದ ಬಯಲಾಗಿದೆ. ಅದರಲ್ಲೂ ಆಮ್ ಆದ್ಮಿ ಪಕ್ಷದ ಕಾಪೋರೇಟರ್ ತಾಹಿರ್ ಹುಸೇನ್ ಸ್ವತಹ ಇದರಲ್ಲಿ ಭಾಗಿಯಾಗಿರುವುದು ಗಲಭೆಕೋರರನ್ನು ಪ್ರತ್ಯಕ್ಷವಾಗಿಯೇ ಪ್ರಚೋದಿಸುತ್ತಿರುವ ದೃಶ್ಯಾವಳಿಗಳು,  ಮತ್ತವನ ಮನೆಯ ಟೆರೇಸಿನ ಮೇಲೆ ಪೆಟ್ರೋಲ್ ಬಾಂಬ್, ಕಲ್ಲು, ಮಾರಕಾಸ್ತ್ರಗಳ ಪತ್ತೆಯಾಗಿರುವುದು  ಪರಿಸ್ಥಿತಿಯ ಭೀಕರತೆಯ ಬಗೆಗೆ ಮತ್ತೆ ಮತ್ತೆ ಗಂಭೀರವಾಗಿ ಆಲೋಚಿಸುವಂತೆ ಮಾಡಿವೆ.  ಐಬಿ ಅಧಿಕಾರಿ ಅಂಕಿತ್ ಶರ್ಮಾರನ್ನು ಬರೋಬ್ಬರಿ ೨೫೦ಕ್ಕೂ ಅಧಿಕ ಸಲ ಇರಿದು ಬರ್ಬರವಾಗಿ ಹತ್ಯೆ ಮಾಡುವಲ್ಲೂ ತಾಹಿರ್ ಹುಸೇನ್ ಭಾಗಿಯಾಗಿದ್ದನೆನ್ನುವ ಆರೋಪವಿದೆ. ಇಂತಹ ಆದ್ಮಿಯನ್ನು ಪೋಲಿಸರು ತತ್‌ಕ್ಷಣ ಬಂಧಿಸದೆ ಈಗ ತಲೆಮರೆಸಿಕೊಂಡಿದ್ದಾನೆ ಎಂದರೆ ಅವನಿಗೆ ನೆರವಾದವರು ಯಾರು ಎನ್ನುವ ಪ್ರಶ್ನೆಗೆ ದೆಹಲಿ ಪೊಲೀಸರೇ ಉತ್ತರಿಸಬೇಕಿದೆ.

ಇದೆಲ್ಲದರ ನಡುವೆಯೂ ಹಿಂದು ಮುಸ್ಲಿಂ ಸಿಖ್ ಜನರು ಮತ್ತಷ್ಟು ಹತ್ಯಾಕಾಂಡಗಳು ನಡೆಯದಂತೆ ಪರಸ್ಪರರಿಗೆ ಅಶ್ರಯ ಕೊಟ್ಟು ಪ್ರಾಣಗಳನ್ನು ಕಾಪಾಡಿದ ಅನೇಕ ಉದಾಹರಣೆಗಳು ಗಲಭೆ ಪೀಡಿತ ದೆಹಲಿಯಲ್ಲೇ ನಡೆದಿರುವುದು ನಿಜಕ್ಕೂ ಅಭಿನಂದನೀಯ ಸಂಗತಿ. ಅವರು ನಿಜವಾದ ಭಾರತೀಯರು. ಅವರಿಗೆ ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎನ್ನುವುದು ಗೊತ್ತು. ಪರಸ್ಪರರೊಡನೆ ಶಾಂತಿ ಸೌಹಾರ್ದ ಸಾಮರಸ್ಯಗಳೇ ನೆಮ್ಮದಿಯ ಬದುಕಿಗೆ ಮುಖ್ಯ ಎನ್ನುವುದು ಕೂಡ ಗೊತ್ತು. ಅದೇ ನಿಜವಾದ ಭಾರತ.

ನಿದ್ರಿಸುವವರು ಎಚ್ಚರಗೊಳ್ಳುತ್ತಾರೆ, ಆದರೆ ನಿದ್ರಿಸು ವಂತೆ ನಟಿಸುವವರಿಗೆ ಎಚ್ಚರ ಆಗುವುದಿಲ್ಲ ಎಂದು ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿರುವುದು ಅಕ್ಷರಶ ಸತ್ಯ. ಈ ಸಿಎಎಯಿಂದ ಯಾವೊಬ್ಬ ಭಾರತೀಯನಿಗೂ ಅಪಾಯವಿಲ್ಲ ಮತ್ತು ಇದು ನಾಗರಿಕತ್ವ ಕಿತ್ತುಕೊಳ್ಳುವ ಕಾನೂನಲ್ಲ. ಪೌರತ್ವ ಕೊಡುವ ಕಾನೂನೂ ಎನ್ನುವುದು ಸ್ಪಟಿಕದಷ್ಟೇ ಸ್ಪಷ್ಟವಾಗಿದ್ದರೂ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದಾದಲ್ಲಿ ವಿರೋಧಿಸುವವರ ನೈಜ ಉದ್ದೇಶವೇನು ಎನ್ನುವುದನ್ನು ಸ್ಪಷ್ಟಪಡಿಸಬೇಕಿದೆ. ಆಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುವ ಕಾರ್ಯವನ್ನು  ಆಸ್ಸಾಂನಲ್ಲಿ ಎನ್‌ಆರ್‌ಸಿ ಮೂಲಕ ನಡೆಸಿದರೆ ಅದನ್ನು ವಿರೋಧಿಸುವ ಅಗತ್ಯವೇನು? ಅಜ್ಜ ಅಜ್ಜಿ ಮುತ್ತಾತನ ದಾಖಲೆ, ಜನನ ಪ್ರಮಾಣ ಪತ್ರ ಕೇಳುತ್ತಾರೆ, ಇಲ್ಲದಿದ್ದರೆ ದೇಶದಿಂದ ಹೊರದಬ್ಬುತ್ತಾರೆ ಎಂದು ಅಪ್ಪಟ ಸುಳ್ಳುಗಳನ್ನು ಪೇಯ್ಡ್ ಬಾಯಿಗಳ ಮೂಲಕ ಹೇಳಿಸಿ ಜನರ ದಾರಿ ತಪ್ಪಿಸುವ ಉದ್ದೇಶವೇನು ಎನ್ನುವುದನ್ನು ತಿಳಿಸಿ.

ಕಾಯ್ದೆಯಲ್ಲಿರುವ ಅದ್ಯಾವ ಅಂಶಕ್ಕೆ ನಿಮ್ಮ ವಿರೋಧ ಇದೆ ಎನ್ನುವುದನ್ನು ಸ್ಪಷ್ಟಪಡಿಸಿ. ಆಮೇಲೆ ಎಷ್ಟು ಬೇಕಾದರೂ ಸಂವಿಧಾನ ಬದ್ಧವಾಗಿ ವಿರೋಧಿಸಿ. ಆ ಹಕ್ಕು ಖಂಡಿತಾ ನಿಮಗಿದ್ದೇ ಇದೆ. ಆದರೆ ಕಾಯಿದೆಯ ಪೂರ್ವಾಪರವನ್ನೇ    ತಿಳಿದುಕೊಳ್ಳದೆ ವಿರೋಧಿಸುವುದು ಖಂಡಿತಾ ತಪ್ಪು. ಸಾಮರಸ್ಯದಿಂದ ಬಾಳುತ್ತಿರುವ ಜನಗಳ ಮದ್ಯೆ ಬೆಂಕಿ ಹಚ್ಚುವ ಕೆಲಸ ಯಾರೊಬ್ಬರೂ ಮಾಡದಿರಲಿ. ದೊಡ್ಡವರೆನ್ನಿಸಿಕೊಂಡವರ ಧರ್ಮಾಂಧತೆಗೆ, ಕಪಟ, ವಂಚನೆ ದ್ರೋಹಗಳಿಗೆ, ಸ್ವಹಿತಾಸಕ್ತಿಗಳಿಗೆ ಸಾಮಾನ್ಯ ಜನರ ಪ್ರಾಣ ಎರವಲಾಗದಿರಲಿ ಎನ್ನುವುದು ಆಶಯ. ದಂಗೆ ಕೋರರಿಗೆ ಮತ್ತವರ ಬೆಂಬಲಿಗರಿಗೆ, ಪ್ರಚೋದಕರಿಗೆ ಕಠಿಣ ಶಿಕ್ಷೆಯಾಗಲಿ.

ಕೊನೆ ಮಾತು: ಪರಿಸ್ಥಿತಿ ತೀರಾ ಕೈ ಮೀರುವ ಸಂದರ್ಭಗಳಲ್ಲಿ ಪೊಲೀಸರಿಗೆ ಸಂಪೂರ್ಣ ಬಲ ಪ್ರಯೋಗಿಸಲು ವಿಶೇಷ ಅನುಮತಿಯನ್ನು ನೀಡುವಂತಹ ಕಾನೂನು ಜಾರಿಗೆ ಬರಬೇಕಿದೆ. ಗಲಭೆ ದಂಗೆಯಂತಹ ಪರಿಸ್ಥಿತಿಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಪೊಲೀಸರ ಬಳಿ ಸಂಪೂರ್ಣ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡುವಂತಹ ವ್ಯವಸ್ಥೆ ರೂಪುಗೊಳ್ಳಲಿ. ಬಿಟ್ಟಿ ಭಾಗ್ಯಗಳಿಗಿಂತ ದೇಶ ಕಾಯುವ ಸಮರ್ಥರಿಗೆ ಮೊದಲು ಮಣೆ ಹಾಕುವಂತಹ ಮನಸು ಜನರದ್ದಾಗಲಿ. ದೇಶವಿದ್ದರೆ ತಾನೇ ನಾವು ನೀವು ಮತ್ತು ಧರ್ಮ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss