ಹೊಸ ದಿಗಂತ ವರದಿ, ಧಾರವಾಡ:
ಈಚೇಗೆ ಕೇಂದ್ರ ಸರ್ಕಾರ ಜಾರಿಗೆ ತಂದ ರೈತಪರ ಕಾನೂನುಗಳು ಹಾಗೂ ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಐತಿಹಾಸಿಕ ನಿರ್ಣಯವಾಗಿದೆ. ಇದೆಲ್ಲವೂ ವಿಪಕ್ಷಗಳು ಮಾಡಿದ ಷಡ್ಯಂತ್ರ ಎಂದು ಕೇಂದ್ರದ ಗಣಿ-ಭೂವಿಜ್ಞಾನ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ರೈತಪರವಾಗಿದೆ. ದೇಶದ ರೈತರ ಶೋಷಣೆ ತಪ್ಪಿಸಲು ಈ ಕಾಯ್ದೆ ಜಾರಿಗೆ ತಂದಿದೆ. ಕೆಲ ವಿಪಕ್ಷಗಳ ಕುಮ್ಮಕ್ಕಿನಿಂದ ದೆಹಲಿ ಸುತ್ತಮುತ್ತಲಿನ ಜನರನ್ನು ಕರೆತಂದು ತೊಂದರೆ ಕೊಡುವ ಕೆಲಸ ನಡೆದಿದೆ ಎಂದು ದೂರಿದರು.
ಪ್ರತಿಭಟನೆಯಿಂದ ಸೈನಿಕರಿಗೆ ಆಹಾರ ತಲುಪಿಸಲು ಸಮಸ್ಯೆಯಾಗಿದೆ. ಇವರ ಉದ್ದೇಶಗಳೇ ಗೊತ್ತಾಗುತ್ತಿಲ್ಲ. ಇದು ರೈತಪರ ಕಾಯ್ದೆ. ಎಪಿಎಂಸಿ ಸದೃಢವಾಗಿದ್ದರೆ, ರೈತ ಏತಕ್ಕಾಗಿ ಬೆಳೆಗಳನ್ನು ರಸ್ತೆಗೆ ಎಸೆಯುತ್ತಿದ್ದರು. ಎಪಿಎಂಸಿ ದೋಷ ಮುಕ್ತ ಮಾಡಲು ಕಾಯ್ದೆ ಜಾರಿಗೆ ತಂದಿದೆ ಎಂದು ತಿಳಿಸಿದರು.
ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಿದ್ದು ಸಿದ್ದರಾಮಯ್ಯ ಅಲ್ಲ, ಕಾಂಗ್ರೆಸ್ ಹೈಕಮಾಂಡ್. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೀತು ಎನ್ನುವ ಭಯದಲ್ಲಿ ತರಾತುರಿಯಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಆಪಾದಿಸಿದರು.
ಹರಿಯುವ ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ? ಕುಮಾರಸ್ವಾಮಿಗೆ ಬೆಂಬಲಿಸುವ ಕುರಿತಂತೆ ಸಿದ್ದರಾಮಯ್ಯನನ್ನು ಕಾಂಗ್ರೆಸ್ ಕೇಳಿಲ್ಲ. ಹೈಕಮಾಂಡ ಮಾಡಿದನ್ನು ತಮ್ಮ ಕ್ರೆಡಿಟ್ಗೆ ತೆಗೆದುಕೊಳ್ಳೋದು ಬೇಡ. ಅವರ ಮಧ್ಯೆ ನಡೆದ ಟ್ವೀಟ್ ವಾರ್ ಬಗ್ಗೆ ಹೇಳಲಾರೆ ಎಂದು ವ್ಯಂಗ್ಯವಾಡಿದರು.
ಕಾoಗ್ರೆಸ್ ಬೀಳುವುದರಲ್ಲಿ ಸಿದ್ದರಾಮಯ್ಯ ಪಾತ್ರ ಅಂತಾ ಎಚ್ಡಿಕೆ ಹೇಳಿದ್ದಾರೆ. ಅದಕ್ಕೆ ಸರ್ಮಥ ಉತ್ತರ ಕೊಡುವುದು ಸಿದ್ದರಾಮಯ್ಯ ಜವಾಬ್ದಾರಿ. ಕಾಂಗ್ರೆಸ್ ಯಾವತ್ತೂ, ಯಾರ ಪರವೂ ಇಲ್ಲ. ಅದು ಕೇವಲ ಅಧಿಕಾರ, ಭ್ರಷ್ಟಾಚಾರ, ದಲ್ಲಾಳಿ, ದೇಶ ವಿಭಜಕರ ಪರವಾಗಿದೆ ಎಂದು ಆಪಾದಿಸಿದರು.