ಹೊಸ ದಿಗಂತ ವರದಿ, ಮಡಿಕೇರಿ:
ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಬಹುತೇಕ ರಸ್ತೆಗಳು ಡಾಮರೀಕರಣಗೊಂಡಿದ್ದರೂ, ಮೂರು ವಾರ್ಡ್ಗಳನ್ನು ಒಳಗೊಂಡಿರುವ ದೇಚೂರು ರಸ್ತೆಯನ್ನು ನಗರಸಭೆ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೂನಿಯರ್ ಕಾಲೇಜು ರಸ್ತೆಯಿಂದ ದೇಚೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಅಶ್ವಥಕಟ್ಟೆ ಎದುರಿನ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ತಿಂಗಳ ಹಿಂದೆ ತರಾತುರಿಯಲ್ಲಿ ದೇಚೂರಿನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಾಮರೀಕರಣ ಮಾಡಿರುವ ನಗರಸಭೆ ಪಕ್ಕದಲ್ಲೇ ಇರುವ ರಸ್ತೆಗಳನ್ನು ನಿರ್ಲಕ್ಷಿಸಿದೆ.
ಗುಂಡಿಗಳಲ್ಲಿ ರಸ್ತೆಯನ್ನು ಹುಡುಕಬೇಕಾದ ದುಸ್ಥಿತಿ ಇಲ್ಲಿದ್ದು, ಈ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ಇದೆ. ಆದರೆ ದುರಸ್ತಿ ಕಾರ್ಯ ಕೈಗೊಳ್ಳದೆ ನಿರ್ಲಕ್ಷಿಸಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಆಟೋರಿಕ್ಷಾಗಳು ಕೂಡ ಬಾರದ ಪರಿಸ್ಥಿತಿ ಇದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.
ದೇಚೂರಿನಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರೊಬ್ಬರು ಮತ್ತು ಮಾಜಿ ಸದಸ್ಯರೊಬ್ಬರು ವಾಸವಾಗಿದ್ದಾರೆ. ಆದರೆ ಇವರುಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರಸ್ತೆ ದುರಸ್ತಿಗೆ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಸ್ಥಳೀಯ ನಿವಾಸಿ ಉಮೇಶ್ ಗೌಡ, ಅಧಿಕಾರದಲ್ಲಿದ್ದರೆ ಮಾತ್ರ ಸಾರ್ವಜನಿಕರ ಸೇವೆ ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ರಸ್ತೆ ಅವ್ಯವಸ್ಥೆ ಬಗ್ಗೆ ಪೌರಾಯುಕ್ತರ ಗಮನ ಸೆಳೆಯಲಾಗಿದ್ದು, ಡಾಮರೀಕರಣದ ಭರವಸೆ ದೊರೆತಿದೆ. ಮುಂದಿನ ಒಂದು ವಾರದೊಳಗೆ ಕಾಮಗಾರಿ ಆರಂಭಗೊಳ್ಳದಿದ್ದಲ್ಲಿ ಸ್ಥಳೀಯ ನಿವಾಸಿಗಳ ಸಹಿತ ನಗರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.