ಹೊಸದಿಗಂತ ವರದಿ, ರಾಮನಗರ:
ತಾಲ್ಲೂಕಿನ ಜಾಲಮಂಗಲದ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲದಲ್ಲಿ ಶುಕ್ರವಾರ ಕುಟುಂಬದೊಂದಿಗೆ ಪೂಜೆ ಸಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ, ದೇವರಿಗೆ 101 ರೂ. ತಪ್ಪು ಕಾಣಿಕೆಯನ್ನೂ ಅರ್ಪಿಸಿದರು.
ಈ ಹಿಂದೆ ಎಚ್ಡಿಕೆ ಇದೇ ದೇವರ ಮುಂದೆ ‘ನನಗೆ ಯಾವುದೇ ಅಧಿಕಾರ ಬೇಡ’ ಎಂದಿದ್ದರು. ಆದರೆ ನಂತರದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆದರೂ ಅಧಿಕಾರ ಅರ್ಧಕ್ಕೆ ಮೊಟಕಾಗಿತ್ತು. ಈ ಕೊರಗು ನೀಗಿಸಿಕೊಳ್ಳಲು ಕುಮಾರಸ್ವಾಮಿ ದೇವರಿಗೆ ಕಾಣಿಕೆ ಅರ್ಪಿಸಿ, ಹಿಂದೆ ತಮ್ಮಿಂದ ಆಗಿರುವ ತಪ್ಪನ್ನು ಮನ್ನಿಸುವಂತೆ ಪ್ರಾರ್ಥಿಸಿದರು.
ಈ ಕುರಿತು ಮಾತನಾಡಿದ ಕುಮಾರಸ್ವಾಮಿ ‘2004ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ, ಲಕ್ಷ್ಮಿ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವ ಸಂದರ್ಭ ಇಲ್ಲಿನ ಜನ ನನ್ನನ್ನು ಮುಂದಿನ ಮುಖ್ಯಮಂತ್ರಿ ಎಂದು ಕೂಗಿದ್ದರು.
‘ಈ ಕ್ಷೇತ್ರದ ಪ್ರತಿಯೊಬ್ಬರೂ ಸಂತೋಷದಿಂದ ಬದುಕುವಂತೆ ಮಾಡಬೇಕು. ಅಲ್ಲಿಯವರೆಗೂ ಮಂತ್ರಿ ಸ್ಥಾನಕ್ಕೆ ಆಸೆ ಪಡಲ್ಲ’ ಎಂದು ಅವರೆದುರು ಭಾಷಣ ಮಾಡಿದ್ದೆ. ಆದರೆ ನಂತರದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆದರೂ ಅರ್ಧಕ್ಕೆ ಅಧಿಕಾರ ಮೊಟಕಾಯಿತು.
ಅಂದಿನಿಂದಲೂ ದೇವರ ಸನ್ನಿಧಿಯಲ್ಲಿ ಆಡಿದ ಮಾತು ತಪ್ಪಿ, ಅಪಚಾರ ಎಸಗಿದ್ದಿನೇನೊ ಎಂದು ಮನಸ್ಸಿನಲ್ಲಿ ಕೊರಗಿದೆ. ಹೀಗಾಗಿ ಕುಟುಂಬ ಸಮೇತ ಬಂದು ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಕೇಳಿದ್ದೇನೆ. 2023ರ ಚುನಾವಣೆಗೆ ಆಶೀರ್ವಾದ ಕೋರಿದ್ದೇನೆ’ ಎಂದರು.