Wednesday, June 29, 2022

Latest Posts

ದೇವಾಲಯದ ಸ್ವಾಯತ್ತತೆಗೆ ತಡೆಯೊಡ್ಡುವ ಕಾನೂನಿನ ವಿರುದ್ಧ ಹೋರಾಟ, ಎಚ್ಚರಿಕೆ

ಹೊಸ ದಿಗಂತ ವರದಿ, ಶಿರಸಿ:

ರಾಜ್ಯ ಸರ್ಕಾರವು ಸುಪ್ರಿಂ ಕೋರ್ಟ್ ನಲ್ಲಿ ದಾಖಲಿಸಿರುವ ಮೇಲ್ಮನವಿಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಲದ ಪ್ರಮುಖ ಕುಮಟಾದ ಎಲ್.ಬಿ.ಶಾನಭಾಗ ಹೇಳಿದರು.
ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಹಾಮಂಡಲದ ಸ್ಥಳೀಯ ಘಟಕದ ವತಿಯಿಂದ ನಡೆದ ಧಾರ್ಮಿಕ ಮುಖಂಡರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಈ ಕಾನೂನು ಜಾರಿಯಾದರೆ ದೇವಾಲಯಗಳು ಸರ್ಕಾರಿ ಕಚೇರಿಯಂತಾಗುತ್ತವೆ. ಆಸ್ತಿಕರ ಭಾವನೆಗೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಸಂಪ್ರದಾಯಗಳು ಮೂಲೆಗುಂಪಾಗುತ್ತವೆ. ಹೀಗಾಗಿ ದೇವಾಲಯದ ಸ್ವಾಯತ್ತತೆಗೆ ತಡೆಯೊಡ್ಡುವ ಈ ಕಾನೂನಿನ ವಿರುದ್ಧ ಕಾನೂನು ಹೋರಾಟ ನಿರಂತರವಾಗಿ ಮಾಡಲಾಗುವುದು ಎಂದರು. ಸುಪ್ರಿಂ ಕೋರ್ಟ್ ನಲ್ಲಿರುವ ಪ್ರಕರಣ ಇತ್ಯರ್ಥ ಆಗುವವರೆಗೆ ರಾಜ್ಯ ಸರ್ಕಾರ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಬಾರದು. ಭಕ್ತರು, ಧಾರ್ಮಿಕ ಮುಖಂಡರ ಭಾವನೆಗೆ ಧಕ್ಕೆ ತರುವ ಕಾರ್ಯ ಕೈಬಿಡಬೇಕು. ಜತೆ, ರಾಜ್ಯದ ಎಲ್ಲಾ ಹಿಂದೂಗಳಿಗೆ ಸರ್ವಸಮ್ಮತವಾದ, ಸರ್ಕಾರದ ಹಸ್ತಕ್ಷೇಪಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಕಾನೂನು ಜಾರಿಗೆ ತರಬೇಕು ಎಂದರು.
ಮಹಾಮಂಡಳದ ಕಾರ್ಯಾಧ್ಯಕ್ಷ ವೆಂಕಟೇಶ ನಾಯ್ಕ ಪ್ರಾಸ್ತಾವಿಕ ಮಾತನಾಡಿ,
ದೇವಾಲಯಗಳ ಆಡಳಿತದ ಕುರಿತು ಏಕರೂಪದ ಕಾಯ್ದೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರವು ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆ ಮತ್ತು ಇತರ ಕಾಯ್ದೆಗಳನ್ನು ರದ್ದುಪಡಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಅಧಿನಿಯಮ ೧೯೯೭ ಎನ್ನುವ ಹೊಸ ಕಾಯ್ದೆಯನ್ನು ೨೦೦೩ರಲ್ಲಿ ಜಾರಿಗೆ ತಂದಿತ್ತು. ಈ ಕಾಯ್ದೆ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯ ಕಸಿದುಕೊಳ್ಳುವ ಮತ್ತು ದೇವಾಲಯವನ್ನು ಸರ್ಕಾರೀಕರಣಗೊಳಿಸುವಂತೆ ಕಂಡ ಕಾರಣಕ್ಕೆ ಧಾರ್ಮಿಕ ಪ್ರಮುಖರು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ನಿರಂತರ ಕಾನೂನಿನ ಹೋರಾಟದ ನಡುವೆಯೂ ೨೦೧೧ರಲ್ಲಿ ತಿದ್ದುಪಡಿ ಕಾನೂನು ಜಾರಿಗೆ ತರಲಾಯಿತು. ಈ ಕಾನೂನು ಕೂಡ ಬಹುತೇಕ ಈ ಹಿಂದಿನ ಕಾನೂನಿನಂತೆ ಇರುವ ಕಾರಣ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಧಾರ್ಮಿಕ ಪ್ರಮುಖರ ಪರ ತೀರ್ಪು ಬಂದಿತ್ತಾದರೂ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರವು, ಹೈಕೋರ್ಟ್ ನ ಈ ಆದೇಶಕ್ಕೆ ತಡೆಯಾಜ್ಞೆ ತಂದು ಸಂವಿಧಾನ ಬಾಹಿರ ಎಂದು ಘೋಷಿಸಲ್ಪಟ್ಟ ಕಾನೂನನ್ನು ಜಾರಿ ಮಾಡುತ್ತಿದೆ. ಇದು ಖಂಡನೀಯವಾಗಿದೆ ಎಂದರು. ಹಿಂದೂ ದೇವಾಲಯಗಳ ಮೇಲೆ ಆಡಳಿತವು ಪ್ರಹಾರ ಮಾಡುತ್ತಿದೆ. ಯಾವುದೇ ಸರ್ಕಾರವಿದ್ದರೂ ಮುಜರಾಯಿ ಇಲಾಖೆ ಮೂಲಕ ದೇವಾಲಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿವೆ. ಇದು ಅಕ್ಷಮ್ಯವಾಗಿದೆ ಎಂದರು. ಎಲ್ಲ ದೇವಾಲಯಗಳು ಮಹಾಮಂಡಳದ ಸದಸ್ಯತ್ವ ಹೊಂದಬೇಕು. ಸಂಘಟನಾತ್ಮಕವಾಗಿ, ಏಕರೂಪವಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಈ ವೇಳೆ ಮಹಾಮಂಡಳದ ಪ್ರಮುಖರಾದ ಟಿ.ಜಿ.ನಾಡಿಗೇರ, ರವೀಂದ್ರ ಪವಾರ ಇದ್ದರು.
ಪ್ರಮುಖರಾದ ಗೋಪಾಲಕೃಷ್ಣ ವೈದ್ಯ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss