ಹೊಸದಿಗಂತ ವರದಿ, ಶಿವಮೊಗ್ಗ :
ದೇವೇಗೌಡರ ನಾಯಕತ್ವ ಒಪ್ಪಿ ಅವರೊಂದಿಗೆ ಇದುವರೆಗೆ ರಾಜಕೀಯ ಮಾಡಿಕೊಂಡು ಬಂದ್ದೇನೆ. ದೇವೇಗೌಡರು ಕೈಚೆಲ್ಲಿ ವಿಲೀನಕ್ಕೆ ಮುಂದಾದರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಜೆಡಿಎಸ್ ವಕ್ತಾರ ವೈ.ಎಸ್.ವಿ ದತ್ತಾ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಇದುವರೆಗೂ ಸಿದ್ಧಾಂತ ಬದ್ಧವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಈಗ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷವನ್ನು ಇನ್ನಷ್ಟು ಬಲ ತುಂಬುವ ಕೆಲಸ ಅವರಿಂದ ಆಗಲಿದೆ ಎಂದರು.
ರಾಜಕೀಯದಲ್ಲಿ ಸ್ಪಷ್ಟ ನಿಲುವು ಇಲ್ಲದೆ ಜನರ ಮುಂದೆ ಹೋಗಲು ಸಾಧ್ಯವಿಲ್ಲ. ಹಾಗೊಮ್ಮೆ ಹೋದರೆ ಜನರ ಮುಂದೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಪ್ರಾದೇಶಿಕ ಪಕ್ಷಗಳು ನಮ್ಮತನವನ್ನು ಉಳಿಸಿಕೊಂಡು ಜನರ ಒಟ್ಟಿಗೆ ಹೋಗಬೇಕಿದೆ ಎಂದರು.
ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನದ ಪ್ರಶ್ನೆಯೇ ಇಲ್ಲವೆಂದು ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ನನ್ನಂತಹ ಅನೇಕ ಕಾರ್ಯಕರ್ತರಿಗೆ ಸಮಾಧಾನವಾಗಿದೆ. ಸಾಮಾಜಿಕ ನ್ಯಾಯ, ವೈಚಾರಿಕತೆ, ಜಾತ್ಯತೀತ ಸಿದ್ಧಾಂತಗಳನ್ನು ಪ್ರತಿಪಾದಿಸಿಕೊಂಡು ಬಂದ ಭಿನ್ನಾಭಿಪ್ರಾಯ ಇರುವ ನನ್ನಂತಹ ಅನೇಕರು ಬಿಜೆಪಿಗೆ ಹೋಗಲು ಇಷ್ಟಪಡುವುದಿಲ್ಲ ಎಂದರು.
ಬಸವರಾಜ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೊರಟ್ಟಿ ಹೇಳಿಕೆ ಸಭಾಪತಿ ಆಯ್ಕೆಗೆ ಮಾತ್ರ ಸೀಮಿತವೆಂದು ಭಾವಿಸಿದ್ದೇನೆ. ಅದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ನಾನು ಕಾಂಗ್ರೆಸ್ಗೆ ಹೋಗುವುದಾಗಿ ಕೆಲ ಟಿವಿಯವರು ಸುಳ್ಳು ಸುದ್ಧಿ ಮಾಡಿದ್ದರೆ. ಕೆಲವರು ವಿಲಕ್ಷಣ ಖುಷಿಗಾಗಿ ಇಂತಹ ಸುಳ್ಳು ಸುದ್ದಿ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.