ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಭೀತಿ ನಡುವೆ ಚೇತರಿಕೆ ಪ್ರಮಾಣವೂ ಹೆಚ್ಚುತ್ತಿದ್ದು, ಕಳೆದ ೨೪ ಗಂಟೆಯಲ್ಲಿ ೪,೬೧೧ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.೪೮.೦೨ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು, ಭೀತಿ ನಡುವೆಯೂ ಜನರು ನಿಟ್ಟುಸಿರು ಬಿಡುವಂತಾಗಿದೆ.
ಈ ಸಂಬಂಧಿಸಿದಂತೆ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆಯೇ, ಗುಣಮುಖರ ಸಂಖ್ಯೆ ಕೂಡ ಹೆಚ್ಚುತ್ತಿದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆಗೆ ಹೋಲಿಸಿದಾಗ ಗುಣಮುಖರ ಸಂಖ್ಯೆ ೪೮.೦೨ರಷ್ಟಿದೆ ಎಂದಿದ್ದಾರೆ.
ಅಲ್ಲದೆ, ಕೊರೋನಾದಿಂದ ಮೃತರಾಗುತ್ತಿರುವವರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಶನಿವಾರ ೨೯೪ ಜನ ಸೋಂಕಿನಿಂದ ಮೃತರಾಗಿದ್ದು, ಒಟ್ಟು ಸಂಖ್ಯೆ ೬,೬೭೨ಕ್ಕೆ ಏರಿಕೆಯಾಗಿದೆ. ಇದಕ್ಕಿಂತ ಪ್ರತಿನಿತ್ಯ ಗುಣಮುಖರಾಗುತ್ತಿರುವವರ ಸಂಖ್ಯೆಯೆ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಕೊರೋನಾ ಪರೀಕ್ಷೆ ಸಾಮರ್ಥ್ಯ ಕೂಡ ಹೆಚ್ಚುತ್ತಿದ್ದು, ಸರ್ಕಾರಿ ಲ್ಯಾಬ್ಗಳನ್ನು ೫೨೦ಕ್ಕೆ ಹಾಗೂ ಖಾಸಗಿ ಲ್ಯಾಬ್ಗಳ ಸಂಖ್ಯೆ ೨೨೨ಕ್ಕೆ ಹೆಚ್ಚಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಸೋಂಕು ಪತ್ತೆ ಪರೀಕ್ಷೆ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದು, ಮಂಡಳಿ ಕಳೆದ ೨೪ ಗಂಟೆಯಲ್ಲಿ ೧,೩೭,೯೩೮ ಮಾದರಿಗಳನ್ನು ಪರೀಕ್ಷಿಸಿದೆ.
ಒಂದೇ ದಿನ ೯,೮೮೭ ಸೋಂಕಿತರು
ದಿನೇದಿನೆ ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಮಾಣ ಜಾಸ್ತಿ ಆಗುತ್ತಿದ್ದರೂ, ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ೨೪ ಗಂಟೆಯಲ್ಲಿ ೯,೮೮೭ ಮಂದಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿ ಕೆಲವೇ ರಾಜ್ಯಗಳಲ್ಲಿ ಸೋಂಕು ಜಾಸ್ತಿಯಾಗುತ್ತಿರುವುದು ಆತಂಕ ಮೂಡಿಸಿದೆ.