Wednesday, August 10, 2022

Latest Posts

ದೇಶದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ.64 ಕ್ಕೆ ಏರಿಕೆ, ಮರಣ ಪ್ರಮಾಣ ಶೇ.6.6ಕ್ಕೆಇಳಿಕೆ

ಹೊಸದಿಲ್ಲಿ: ದೇಶದಲ್ಲೀಗ ಕೊರೋನಾ ವೈರಾಣು ಸೋಂಕು ಪೀಡಿತರ ಗುಣಮುಖ ಪ್ರಮಾಣ ಶೇ.64ಕ್ಕೇರಿದ್ದು, ಸಾವಿನ ಪ್ರಮಾಣ ಶೇ.6.6ಕ್ಕೆ ಇಳಿಕೆಯಾಗಿದೆ.ಇದು ವಿಶ್ವದಲ್ಲೇ ಅತ್ಯುತ್ತಮವಾಗಿದೆ. ಅಲ್ಲದೆ ದೇಶದಲ್ಲಿ ಮುಂದಿನ ಒಂದೆರಡು ತಿಂಗಳುಗಳೊಳಗೆ ದಿನವಹಿ ಕೋವಿಡ್-19 ಸೋಂಕು ಪರೀಕ್ಷೆಯ ಪ್ರಮಾಣವನ್ನು ೧೦ಲಕ್ಷಗಳಿಗೇರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪ್ರಕಟಿಸಿದ್ದಾರೆ.
ಏಪ್ರಿಲ್‌ನಲ್ಲಿ ದಿನವೊಂದಕ್ಕೆ ಕೇವಲ 6000ಪರೀಕ್ಷೆಗಳು ನಡೆಯುತ್ತಿದ್ದರೆ ಈಗ ದೇಶದಲ್ಲಿ ದಿನಂಪ್ರತಿ 5 ಲಕ್ಷ ಸೋಂಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಒಂದು ಅಥವಾ ಎರಡು ತಿಂಗಳೊಳಗೆ ಈ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ದೇಶದಲ್ಲಿ ಕೋವಿಡ್-19ಪರೀಕ್ಷಾ ಪ್ರಮಾಣ ಕಡಿಮೆಯಿರುವುದು ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆ ಇರಲು ಕಾರಣವೆಂದು ವಿರೋಧಪಕ್ಷಗಳು , ಕೆಲವು ತಜ್ಞರೆನಿಸಿಕೊಂಡವರು ಈ ಹಿಂದೆ ಕೊಂಕು ನುಡಿದಿದ್ದ ಹಿನ್ನೆಲೆಯಲ್ಲೇ ದೇಶದಲ್ಲಿ ಕೋವಿಡ್-19 ಪರೀಕ್ಷಾ ಪ್ರಮಾಣ ಭಾರೀ ವೇಗದಲ್ಲಿ ವೃದ್ಧಿಯಾಗುತ್ತಿರುವುದು ಗಮನ ಸೆಳೆದಿದೆ.
ಇದೇ ವೇಳೆ, ಕೋವಿಡ್-19 ನಿಯಂತ್ರಣಕ್ಕೆ ಸಂಬಂಸಿದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ತಂತ್ರಜ್ಞಾನಗಳ (ಸಿಎಸ್‌ಐಆರ್) ಸಂಗ್ರಹವನ್ನು ಬಿಡುಗಡೆ ಮಾಡಿದ ಡಾ.ಹರ್ಷವರ್ಧನ್, ಕೋವಿಡ್-19 ನ್ನು ಎದುರಿಸುವುದಕ್ಕಾಗಿ ವೈದ್ಯಕೀಯ ಸಮುದಾಯದ ಜೊತೆಗೆ ಶ್ರಮಿಸುತ್ತಿರುವ ವೈಜ್ಞಾನಿಕ ಸಮುದಾಯವನ್ನೂ ಸಚಿವರು ಪ್ರಶಂಸಿದ್ದಾರೆ.
ಆರಂಭದಲ್ಲಿ ವೆಂಟಿಲೇಟರ್‌ಗಳನ್ನು ಆಮದು ಮಾಡುತ್ತಿದ್ದ ಭಾರತವೀಗ ಅಗತ್ಯವಿರುವ ಬಹುತೇಕ ವೆಂಟಿಲೇಟರ್ ಗಳನ್ನು ದೇಶದಲ್ಲೇ ತಯಾರಿಸಲಾಗುತ್ತಿದೆ. 3 ಲಕ್ಷ ವೆಂಟಿಲೇಟರ್ ಉತ್ಪಾದನಾ ಸಾಮರ್ಥ್ಯ ಈಗ ಭಾರತಕ್ಕಿದೆ.ಭಾರತ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧವನ್ನು 150 ದೇಶಗಳಿಗೆ ರಫ್ತು ಮಾಡುತ್ತಿದೆ. ಇದೀಗ ದೇಶದಲ್ಲಿ ಕೋವಿಡ್-19ಕ್ಕೆ ಸಂಬಂಸಿದ ಅಗತ್ಯ ಸಾಧನಗಳ ರಫ್ತಿನ ಮೇಲೆ ಇದ್ದ ನಿರ್ಬಂಧವನ್ನೂ ಕೇಂದ್ರ ಸರಕಾರ ತೆಗೆದುಹಾಕಿದೆ. ಜ.30ರಂದು ದೇಶದಲ್ಲಿ ಮೊದಲ ಕೋವಿಡ್-19ಪ್ರಕರಣ ವರದಿಯಾಗಿತ್ತು.ಆದರೆ ಇಷ್ಟು ದೊಡ್ಡ ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತಾರದ ನಡುವೆಯೂ ಕೊರೋನಾ ವಿರುದ್ಧ ಭಾರತದ ಸಮರ ಸಮರ್ಥವಾಗಿ ನಡೆಯುತ್ತಿರುವುದಾಗಿ ಈಗಾಗಲೇ ವಿಶ್ವಸಮುದಾಯ ಗುರುತಿಸಿರುವುದಿಲ್ಲಿ ಉಲ್ಲೇಖನೀಯ.
ಲಸಿಕೆ
ಭಾರತ 1000ಕ್ಕೂ ಹೆಚ್ಚು ಕೊರೋನಾ ವೈರಸ್ ಜಿನೋಮ್‌ಗಳ ವಿಸ್ತೃತ ವರ್ಗೀಕರಣಕ್ಕೆ ಶಕ್ತವಾಗಿದ್ದು, ವೈರಾಣು ಜೀನೋಮ್ ವರ್ಗೀಕರಣಕ್ಕೆ ಶಕ್ತವಾಗಿರುವ ವಿಶ್ವದ ಐದು ದೇಶಗಳಲ್ಲಿ ಭಾರತ ಒಂದಾಗಿದ್ದು, ಲಸಿಕೆಯ ಮಾನವ ಪ್ರಯೋಗದ ಹಂತಕ್ಕೆ ಹೋಗಿರುವ ಕೆಲವೇ ದೇಶಗಳಲ್ಲಿ ಭಾರತ ಒಂದಾಗಿದೆ.ಭಾರತ್ ಬಯೋಟೆಕ್ ಮತ್ತು ಜೈಡಸ್ ಕಾಡಿಲಾ ಮೂಲಕ ಲಸಿಕೆಯ ಮಾನವ ಪ್ರಯೋಗ ಕೈಗೊಳ್ಳಲಾಗಿರುವುದನ್ನು ಅವರು ಪ್ರಸ್ತಾವಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss