Wednesday, July 6, 2022

Latest Posts

ದೇಶದಲ್ಲಿ 50ರ ಗಡಿ ದಾಟಿದ ಕೊರೋನಾ ಪ್ರಕರಣ: ಕೊಕ್ಕರೆಗಳ ಮಾರಣಹೋಮ

ಮೈಸೂರು: ನಗರದಲ್ಲಿ ಕೊಕ್ಕರೆ, ಕೋಳಿಗಳ ಸರಣಿ ಸಾವು ಮುಂದುವರಿದಿರುವುದು ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಒಂದೆಡೆ ಕೊರೋನಾ ವೈರಸ್ ಹರಡುವ ಭೀತಿಯಲ್ಲಿಯೇ ಮುಳುಗಿ, ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂದು ಜನರು ಚಿಂತೆ ಯಲ್ಲಿರುವಾಗಲೇ ಮೈಸೂರು ನಗರ ದಲ್ಲಿ ಪಕ್ಷಿಗಳು, ಕೋಳಿಗಳು ಇದ್ದಕ್ಕಿಂದಂತೆ ಸಾವಿಗೀಡಾಗುತ್ತಿರುವುದು ಆತಂಕ ಉಂಟು ಮಾಡಿದೆ.

20 ದಿನದಲ್ಲಿ 50ಕ್ಕೂ ಹೆಚ್ಚು ಕೊಕ್ಕರೆ, 15 ಕೋಳಿಗಳು ಸರಣಿ ಸಾವಿಗೀಡಾಗಿವೆ. ಮೈಸೂರಿನ ವಾರ್ಡ್ ನಂ.1 ರ ವ್ಯಾಪ್ತಿಯ ಹೆಬ್ಬಾಳ ಕೆರೆ ಸುತ್ತಮುತ್ತ ಪ್ರತಿ ದಿನ ಕೊಕ್ಕರೆಗಳು ಸಾಯುತ್ತಿವೆ. 20 ದಿನಗಳಿಂದ ಸುಮಾರು 50ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟಿವೆ. ಮರಗಳ ಮೇಲೆಯೇ  ಕೊಕ್ಕರೆಗಳು ಸತ್ತು ಬೀಳುತ್ತಿದ್ದು, ಇದರಿಂದಾಗಿ ಹಕ್ಕಿಜ್ವರದ ಆತಂಕ ಮತ್ತಷ್ಟು ಹೆಚ್ಚಾಗಿದೆ.

ನಗರಪಾಲಿಕೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮೃತ ಕೊಕ್ಕರೆಗಳನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಆದರೆ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ಹಲವು ದಿನಗಳಾದರೂ ಇದಕ್ಕೆ ಕಾರಣ ಪತ್ತೆ ಹಚ್ಚಿಲ್ಲ. ವಾರ್ಡ್ ವ್ಯಾಪ್ತಿಯಲ್ಲಿ ಪ್ರತಿದಿನ ಪಕ್ಷಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪಕ್ಷಿಗಳ ಸಾವನ್ನು ತಡೆಗಟ್ಟಲು ಕೂಡಲೇ ಕ್ರಮವಹಿಸುವಂತೆ ನಗರ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಮೈಸೂರಿನ ಮೇಟಗಳ್ಳಿಯ ಮಂಚಮ್ಮ ದೇಗುಲದ ಬಳಿಯ ನಿವಾಸಿ ರಾಮಣ್ಣ ಎಂಬುವರಿಗೆ ಸೇರಿದ 12 ಕೋಳಿಗಳು ದಿನ ಬೆಳಗಾಗುವುದರೊಳಗೆ ಮೃತಪಟ್ಟಿವೆ. ಸೋಮವಾರ ಸಂಜೆ ಎಲ್ಲ ಕೋಳಿಗಳನ್ನು ಗೂಡಿನಲ್ಲಿ ಕೂಡಿ ಹಾಕಲಾಗಿತ್ತು. ಆದರೆ ಮಂಗಳವಾರ ಬೆಳಗಿನ ಜಾವ ಕೋಳಿಗಳು ಎಂದಿನಂತೆ ಕೂಗು ಹಾಕದೇ ಇರುವುದರಿಂದ ಅನುಮಾನಗೊಂಡು ಹೋಗಿ ನೋಡಿದಾಗ ಮೃತಪಟ್ಟಿದ್ದು ಗೊತ್ತಾಗಿದೆ. ಆದಾಗ್ಯೂ ಹಕ್ಕಿ ಜ್ವರದಿಂದ ಪಕ್ಷಿಗಳು ಮೃತಪಡುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ.

ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ: ಈ ನಡುವೆ ಮಾರಕ ಕೋವಿಡ್-19 (ಕೊರೋನಾ) ಸೋಂಕಿನ ಕಾರಣ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೃಗಾಲಯದಲ್ಲಿ ಯಾವುದೇ ಪಕ್ಷಿ ಸತ್ತಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಪಕ್ಷಿ ಮನೆಗಳಿಗೆ ವೈರುಸೈಡ್ ಎಂಬ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದೇವೆ. ಜತೆಗೆ ಪಕ್ಷಿಗಳಿಗೆ ಶಕ್ತಿವರ್ಧಕ ಆಹಾರ ನೀಡುತ್ತಿದ್ದೇವೆ ಎಂದು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

ಸಾವಿಗೆ ಹಕ್ಕಿಜ್ವರ ಕಾರಣ ಅಲ್ಲ: ಕೊಕ್ಕರೆ ಹಕ್ಕಿಗಳು ಮೃತಪಟ್ಟಿ ರುವ ಘಟನೆಗೂ ಹಕ್ಕಿ ಜ್ವರಕ್ಕೂ ಸಂಬಂಧವಿಲ್ಲ ಎಂದು ಪಶುವೈದ್ಯ ಡಾ.ಸುರೇಶ್ ಸ್ಪಷ್ಟಪಡಿಸಿದ್ದಾರೆ.ಆರೋಗ್ಯ ಮತ್ತು ಜೈವಿಕ ಸಂಸ್ಥೆಯು ಕೊಕ್ಕರೆಗಳ ಕಳೇಬರ ಪರಿಶೀಲಿಸಿದ್ದು, ಹಕ್ಕಿಜ್ವರದ ಅಂಶಗಳಿಲ್ಲದಿರುವ ಕುರಿತು ದೃಢಪಡಿಸಿದೆ ಎಂದು ಡಾ.ಸುರೇಶ್ ತಿಳಿಸಿದ್ದಾರೆ. ಸಾರ್ವಜನಿಕರು ಆತಂಕಪಡಬೇಕಿಲ್ಲ ಎಂದೂ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss