ಹೊಸದಿಗಂತ ಆನ್ ಲೈನ್ ಡೆಸ್ಕ್:
ಪುಲ್ವಾಮಾ ದಾಳಿ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿ, ದೇಶದ್ರೋಹ ಆರೋಪದಡಿ ಬಂಧನಕ್ಕೆ ಒಳಗಾಗಿರುವ ವಿದ್ಯಾರ್ಥಿಗೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ರಶೀದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ನಗರದ 51 ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಜಾಮೀನು ನ್ಯಾಯಾಧೀಶ ಆರ್. ಎಚ್. ವೆಂಕಟೇಶ್ ಅವರು ನೀಡಲು ನಿರಾಕರಿಸಿದ್ದಾರೆ.
ರಶೀದ್ 2019ರ ಫೆಬ್ರವರಿ ತಿಂಗಳಲ್ಲಿ ಪುಲ್ವಾಮಾ ದಾಳಿ ಘಟನೆಯಲ್ಲಿ ಹುತಾತ್ಮರಾಗಿದ್ದ 40 ಮಂದಿ ಸಿಆರ್ಪಿಎಫ್ ಭದ್ರತಾ ಪಡೆಯ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಈ ಸಂಬಂಧ ಸಿಸಿಬಿ ಪೊಲೀಸರು 2019ರ ಫೆಬ್ರವರಿ 18ರಂದು ಆರೋಪಿ ಯುವಕನನ್ನು ಬಂಧಿಸಿದ್ದರು. ಐಪಿಸಿ ಸೆಕ್ಷನ್ 153 ಎ, 124ಎ, 201 ಹಾಗೂ ಯುಎಪಿಎ ಸೆಕ್ಷನ್ 16 ಅಡಿ ಪ್ರಕರಣ ದಾಖಲಿಸಿದ್ದರು.
ಈತ ನಗರದ ಕಾಚರಕನಹಳ್ಳಿ ನಿವಾಸಿಯಾಗಿದ್ದು, ಬಿಇ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ 4 ನೇ ಸೆಮಿಸ್ಟರ್ ಓದುತ್ತಿದ್ದನು.
ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ 2019ರಲ್ಲಿಯೇ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ, ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಮತ್ತೆ ಎರಡನೇ ಬಾರಿ ಅರ್ಜಿ ಸಲ್ಲಿಸಿ, ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದನು.