ಹೊಸ ದಿಂಗತ ಆನ್ ಲೈನ್ ಡೆಸ್ಕ್:
ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಇಲ್ಲಿನ ಅನೇಕ ರಾಜಮಾರ್ಗ ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ದಿನೇ ದಿನೇ ವಾಹನ ಸಂಖ್ಯೆ ಪ್ರಮಾಣ ಹೆಚ್ಚುತ್ತಿರುವುದರಿಂದ ವಾಹನ ಸವಾರರು ರಸ್ತೆ ಬಿಟ್ಟು ಪಾದಚಾರಿ ಮಾರ್ಗಗಳಲ್ಲೇ ಹಾದು ಹೋಗುವ ಪರಿಸ್ಥಿತಿ ಬಂದಿದೆ. ಆದರೆ ಇದು ಹೆಚ್ಚಿನ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.
ಈ ಬಗ್ಗೆ ಪಟ್ಟಿ ಬಿಡುಗಡೆಗೊಳಿಸಿದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ), ಪಾದಚಾರಿಗಳ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದ 89 ಮಹಾನಗರಗಳಲ್ಲಿ ಬೆಂಗಳೂರು ನಂಬರ್ 1 ಪಟ್ಟ ಗಿಟ್ಟಿಸಿಕೊಂಡಿದೆ ಎಂದು ತಿಳಿಸಿದೆ.
ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಸವಾರರು ಪಾದಾಚಾರಿ ಮಾರ್ಗಗಳಲ್ಲೇ ಸಂಚರಿಸುತ್ತಾರೆ. ಹೀಗಾಗಿ, ಪಾದಾಚಾರಿಗಳು ರಸ್ತೆಗಳಲ್ಲೇ ಓಡಾಡುವ ಪರಿಸ್ಥಿತಿ ಎದುರಾಗಿದ್ದು, ಅಪಘಾತಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ.
2019ರಲ್ಲಿ ರಾಷ್ಟ್ರಾದ್ಯಂತ ಸಂಭವಿಸಿರುವ ಪಾದಾಚಾರಿ ಅಪಘಾತಗಳ ಕಡೆ ಕಣ್ಣಾಡಿಸಿದರೆ, ಜೈಪುರದಲ್ಲಿ 142, ಅನ್ಸೋಲ್ 139, ಚೆನ್ನೈ 126, ಹೈದರಾಬಾದ್25, ದೆಹಲಿ 72, ಮುಂಬೈ 8, ಬೆಂಗಳೂರಿನಲ್ಲಿ 272 ಪಾದಚಾರಿಗಳು ಬಲಿಯಾಗಿದ್ದಾರೆ.
87 ನಗರಗಳ ಪೈಕಿ ಬೆಂಗಳೂರಿನಲ್ಲೇ ಅಧಿಕ ಸಾವು ಸಂಭವಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದೆ.ಹಾಗೆಯೇ ಬೆಂಗಳೂರು ನಗರದ ಅಂಕಿ-ಅಂಶ ನೋಡುವುದಾದರೆ 2019ರಲ್ಲಿ 265, 2020ರಲ್ಲಿ 124 ಮಂದಿ ಸಾವಿಗೀಡಾಗಿದ್ದಾರೆ.
ಈ ವರ್ಷ ಲಾಕ್ಡೌನ್ ಕಾರಣ ವಾಹನಗಳ ಓಡಾಟ ಕಡಿಮೆಯಿತ್ತು. ಹೀಗಾಗಿ, ಪಾದಾಚಾರಿಗಳು ಸಾವು ಅಷ್ಟೊಂದು ಸಂಭವಿಸಲಿಲ್ಲ. ಆದರೆ, ಅನ್ಲಾಕ್ ನಂತರ ಮತ್ತೆ ಅವುಗಳ ಏರುತ್ತಿದೆ ಎನ್ನಲಾಗಿದೆ.
ಪಾದಾಚಾರಿಗಳ ಸಾವಿಗೆ ಮತ್ತೊಂದು ಕಾರಣ ಎಂದರೆ ಕಾಮಗಾರಿಗಳು. ರಸ್ತೆ ಅಗಲೀಕರಣ, ಮೆಟ್ರೋ ನಿಲ್ದಾಣ ನಿರ್ಮಾಣ, ಪಾದಚಾರಿಗಳ ರಸ್ತೆಗಳಲ್ಲಿ ಕಸ ಎಸೆಯುವುದು ಕೂಡ ಸಮಸ್ಯೆ. ಕಾಮಗಾರಿಗಳು ವರ್ಷಗಳಾದರೂ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ, ಪಾದಾಚಾರಿಗಳು ರಸ್ತೆ ದಾಟುವಾಗ ವಾಹನಗಳು ಗುದ್ದಿಕೊಂಡು ಹೋಗುತ್ತಿವೆ. ಹೀಗಾಗಿ, ಜನರು ಜೀವ ಕೈಯಲ್ಲಿ ಹಿಡಿದುಕೊಂಡು ದಾಟುವುದು ಅನಿವಾರ್ಯ.